ಹೈದರಾಬಾದ್: ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗ ಕುಸಿದು ಎಂಟು ಕಾರ್ಮಿಕರು ಒಳಗಡೆ ಸಿಲುಕಿದ್ದು, ಕಳೆದ ಒಂದು ವಾರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುರಂಗದಲ್ಲಿ ಸಿಲುಕಿಕೊಂಡಿರುವ ಎಂಟು ಕಾರ್ಮಿಕರ ಪೈಕಿ ನಾಲ್ವರು ಇರುವ ಸ್ಥಳವನ್ನು ರಾಡಾರ್ ಮೂಲಕ ಪತ್ತೆಹಚ್ಚಲಾಗಿದೆ ಎಂದು ರಾಜ್ಯ ಅಬಕಾರಿ ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರು ಶನಿವಾರ ತಿಳಿಸಿದ್ದಾರೆ.
ನೀರಾವರಿ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಕೃಷ್ಣ ರಾವ್ ಅವರು, ಕಳೆದ ಎರಡು ದಿನಗಳಲ್ಲಿ ರಕ್ಷಣಾ ಕಾರ್ಯಚಾರಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದರು.
"ನನ್ನ ಅಭಿಪ್ರಾಯದಲ್ಲಿ, ನಾಲ್ಕು ಜನರ ಸ್ಥಳವನ್ನು ರಾಡಾರ್ ಮೂಲಕ ಪತ್ತೆಹಚ್ಚಲಾಗಿದೆ. ಭಾನುವಾರ ಸಂಜೆಯೊಳಗೆ ಅವರನ್ನು ರಕ್ಷಿಸಲಾಗುವುದು" ಎಂದು ಸಚಿವರು ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಉಳಿದ ನಾಲ್ವರು ಸುರಂಗ ಕೊರೆಯುವ ಯಂತ್ರ(ಟಿಬಿಎಂ) ಅಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಪತ್ತೆಯಾದವರ ಸ್ಥಿತಿಯ ಬಗ್ಗೆ ಕೇಳಿದಾಗ, ಅವರು ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಸಚಿವರು ಪುನರುಚ್ಚರಿಸಿದರು.
ಸುಮಾರು 11 ಬೇರೆ ಬೇರೆ ರಕ್ಷಣಾ ತಂಡಗಳ ಸಿಬ್ಬಂದಿ ಸಮರೋಪಾದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೆಸರು ಮತ್ತು ಮಣ್ಣಿನಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಕಾರ್ಮಿಕರನ್ನು ಹೊರಗೆ ತರಲು ಟಿಬಿಎಂ ಅನ್ನು ಕತ್ತರಿಸಲಾಗುತ್ತಿದೆ ಎಂದರು.