ತಿರುಪತಿ: ವಿಶ್ವವಿಖ್ಯಾತ ಮತ್ತು ಹಿಂದೂಗಳ ಪವಿತ್ರ ಯಾತ್ರಾತಾಣವನ್ನು ನಿಷೇಧಿತ ವಲಯವೆಂದು ಘೋಷಿಸಿ ಎಂದು ಕೇಂದ್ರ ಸರ್ಕಾರಕ್ಕೆ ತಿರುಪತಿ ತಿರುಮಲ ದೇಗುಲ ಸಂಸ್ಥೆ ಟಿಟಿಡಿ ಮನವಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಪವಿತ್ರ ತಿರುಮಲ ಕ್ಷೇತ್ರದಲ್ಲಿ ವೈಮಾನಿಕ ಹಾರಾಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದರಿಂದ ತಿರುಮಲದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಟಿಟಿಡಿ ಹೇಳಿದೆ.
ಈ ಕುರಿತು ಮಾತನಾಡಿರುವ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಶನಿವಾರ, 'ತಿರುಮಲವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಿಸಲು ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
ಆಗಮ ಶಾಸ್ತ್ರ (ಪವಿತ್ರ ಗ್ರಂಥಗಳು), ದೇವಾಲಯದ ಪಾವಿತ್ರ್ಯ ಮತ್ತು ಭಕ್ತರ ಸುರಕ್ಷತೆ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ತಿರುಮಲವನ್ನು ಹಾರಾಟ ನಿಷೇಧಿತ ವಲಯವೆಂದು ಘೋಷಿಸಬೇಕು ಎಂದು ಅವರು ಹೇಳಿದರು.
"ತಿರುಮಲ ಬೆಟ್ಟದ ಮೇಲಿನ ಕೆಳಮಟ್ಟದ ಹಾರುವ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಇತರ ವೈಮಾನಿಕ ಚಟುವಟಿಕೆಗಳು ಶ್ರೀವಾರಿ (ವೆಂಕಟೇಶ್ವರ) ದೇವಾಲಯದ ಸುತ್ತಲಿನ ಪವಿತ್ರ ವಾತಾವರಣವನ್ನು ತೊಂದರೆಗೊಳಿಸುತ್ತಿವೆ" ಎಂದು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ತಿರುಮಲದ ಪಾವಿತ್ರ್ಯತೆ ಮತ್ತು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ರಕ್ಷಿಸಲು, ಸೂಕ್ತ ಕ್ರಮಕ್ಕಾಗಿ ಈ ವಿಷಯದಲ್ಲಿ ಪ್ರತಿಕ್ರಿಯಿಸುವಂತೆ ಟಿಟಿಡಿ ಅಧ್ಯಕ್ಷರು ಕೇಂದ್ರ ಸಚಿವರನ್ನು ಕೋರಿದರು.