ರೋಹ್ಟಕ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಸುಮಾರು 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಶವ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ.
ಹೌದು.. ಹರಿಯಾಣದ ರೋಹ್ಟಕ್ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಶನಿವಾರ ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಕ್ಷದ ಸಂಸದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ಹಿಮಾನಿ ನರ್ವಾಲ್ (22) ಎಂಬುವವರ ಶವ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಪುರಸಭೆ ಚುನಾವಣೆಯ ಮುನ್ನಾದಿನ ಈ ಘಟನೆ ನಡೆದಿದ್ದು, ಈ ಘಟನೆ ಹರ್ಯಾಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಸೂಟ್ ಕೇಸ್ ನಲ್ಲಿ ಶವ
ರೋಹ್ಟಕ್ ನ ಸಂಪ್ಲಾ ಬಸ್ ನಿಲ್ದಾಣದ ಬಳಿ ದಾರಿಹೋಕರು ಸೂಟ್‌ಕೇಸ್ ಅನ್ನು ನೋಡಿದ್ದು, ಅನುಮಾನದಿಂದ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ತಲುಪಿದಾಗ ಸೂಟ್‌ಕೇಸ್ ಒಳಗೆ ನರ್ವಾಲ್ ಅವರ ಮೃತದೇಹ ಪತ್ತೆಯಾಗಿದೆ. ಸಂತ್ರಸ್ತಳ ಕುತ್ತಿಗೆಯನ್ನು ದುಪಟ್ಟಾದಿಂದ ಸುತ್ತಿಡಲಾಗಿತ್ತು ಮತ್ತು ಆಕೆಯ ಕೈಯಲ್ಲಿ ಮೆಹೆಂದಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ರೋಹ್ಟಕ್‌ನ ವಿಜಯ್ ನಗರ ಪ್ರದೇಶದ ನಿವಾಸಿ ನರ್ವಾಲ್ ಅವರನ್ನು ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಅವರ ಮೃತದೇಹವನ್ನು ಪಿಜಿಐಎಂಎಸ್ ರೋಹ್ಟಕ್‌ಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಒತ್ತಾಯ
ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಪಕ್ಷದ ಕಾರ್ಯಕರ್ತೆಯ ಸಾವಿಗೆ ಸಂತಾಪ ಸೂಚಿಸಿ, ಈ ವಿಷಯದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಮಾಜಿ ಸಿಎಂ ಆಘಾತ
ಇನ್ನು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ, ನರ್ವಾಲ್ ಅವರ ಕೊಲೆಗೆ ಆಘಾತ ವ್ಯಕ್ತಪಡಿಸಿದ್ದು, ಘಟನೆಯ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ. "ರೋಹ್ಟಕ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಬರ್ಬರ ಹತ್ಯೆಯ ಸುದ್ದಿ ಅತ್ಯಂತ ದುಃಖಕರ ಮತ್ತು ಆಘಾತಕಾರಿಯಾಗಿದೆ. ಅಗಲಿದ ಆತ್ಮಕ್ಕೆ ನಾನು ಗೌರವ ಸಲ್ಲಿಸುತ್ತೇನೆ ಮತ್ತು ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಒಂದು ಕಪ್ಪು ಚುಕ್ಕೆಯಾಗಿದೆ" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಅಂತೆಯೇ "ಈ ಹತ್ಯೆಯ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ಸರ್ಕಾರವು ಸಂತ್ರಸ್ಥೆಯ ಕುಟುಂಬಕ್ಕೆ ಆದಷ್ಟು ಬೇಗ ನ್ಯಾಯ ಒದಗಿಸಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು" ಎಂದು ಅವರು ಹೇಳಿದರು.