ನವದೆಹಲಿ: ರಾಷ್ಟ್ರ ರಾಜಧಾನಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ತಮ್ಮ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಅವರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಕಳೆದ ಮೂರುವರೆ ವರ್ಷಗಳಿಂದ ಜೈಲಿನಲ್ಲಿರುವ ಸುಶೀಲ್ ಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರು, ಆರೋಪಿ ಕುಸ್ತಿಪಟುಗೆ ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೆ ಇಬ್ಬರು ಶ್ಯೂರಿಟಿಗಳೊಂದಿಗೆ 50,000 ರೂ.ಗಳ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಕುಮಾರ್ ಗೆ ಸೂಚಿಸಿದ್ದಾರೆ.
ಕುಮಾರ್ ಮತ್ತು ಇತರರು ಮೇ 2021 ರಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಧಂಕರ್ ಮತ್ತು ಆತನ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಕುಸ್ತಿಪಟು ಸುಶೀಲ್ ಕುಮಾರ್‌ಸುಶೀಲ್ ಕುಮಾರ್ ಅವರು ಕಳೆದ ಮೂರುವರೆ ವರ್ಷಗಳಿಂದ ಜೈಲಿನಲ್ಲಿದ್ದಾರೆ ಮತ್ತು ಪ್ರಾಸಿಕ್ಯೂಷನ್ 200 ಸಾಕ್ಷಿಗಳನ್ನು ಉಲ್ಲೇಖಿಸಿದೆ. ಆದರೆ ಇಲ್ಲಿಯವರೆಗೆ ಕೇವಲ 31 ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲಾಗಿದೆ ಎಂದು ಆರೋಪಿ ಪರ ವಕೀಲ ಆರ್ ಕೆ ಮಲಿಕ್ ಅವರು ಹೇಳಿದ್ದಾರೆ.
ಸಾಕ್ಷಿಗಳ ವಿಚಾರಣೆ ಮುಗಿಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ವಿಳಂಬದ ಕಾರಣ ಸುಶೀಲ್ ಕುಮಾರ್‌ಗೆ ಜಾಮೀನು ನೀಡಬೇಕು ಎಂದು ಮಲಿಕ್ ವಾದಿಸಿದ್ದರು.