ಕೌಸಂಬಿ: ಉತ್ತರ ಪ್ರದೇಶ ಎಸ್ ಟಿಎಫ್ ಮತ್ತು ಪಂಜಾಬ್ ಪೊಲೀಸರು ಕೌಸಂಬಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಬ್ಬರ್ ಖಾಲ್ಸಾ ಎಂಬ ಅಂತಾರಾಷ್ಟ್ರೀಯ ಉಗ್ರ ಸಂಘಟನೆಯ ಮುಖ್ಯಸ್ಥ ಲಾಜರ್ ಮಸಿಹ್ ಎಂಬಾತನನ್ನು ಬಂಧಿಸಿದ್ದಾರೆ.
ಐಎಸ್ ಐ ಉಗ್ರ ಸಂಘಟನೆಯ ಭಾಗವಾಗಿರುವ ಮಸಿಹ್, ಮಹಾಕುಂಭ ಟಾರ್ಗೆಟ್ ಮಾಡಿದ್ದ ಎಂದು ಯುಪಿ ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಮಹಾಕುಂಭ ಮೇಳದ ವೇಳೆ ತೀವ್ರವಾದ ಭದ್ರತಾ ತಪಾಸಣೆಯಿಂದ ಬಂಧಿತ ಉಗ್ರ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ವಿಫಲವಾಗಿದ್ದ ಎಂದು ಅವರು ಹೇಳಿದರು. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ನಡೆಯಿತು.
ಬಂಧಿತ ಉಗ್ರ ಜರ್ಮನಿ ಮೂಲದ ಬಬ್ಬರ್ ಖಾಲ್ಸಾ ಅಂತಾರಾಷ್ಟ್ರೀಯ ಉಗ್ರ ಸಂಘಟನೆಯ ಮುಖ್ಯಸ್ಥ ಸ್ವರ್ಣ್ ಸಿಂಗ್ ಅಲಿಯಾಸ ಜೀವನ್ ಫೌಜಿಗಾಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಆತ ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ಎಸ್ ಟಿಎಫ್ ಹಾಗೂ ಪಂಜಾಬ್ ಪೊಲೀಸರ ಸಮನ್ವಯತೆಯಿಂದ 2024ರಿಂದ ತಲೆಮೆರೆಸಿಕೊಂಡಿದ್ದ ಅಮೃತ ಸರದ ನಿವಾಸಿ ಲಾಜರ್ ಮಸಿಹ್ ಬಂಧಿಸಲಾಗಿದೆ. ಮಸಿಹ್ ಈ ಹಿಂದೆ ಪಾಕಿಸ್ತಾನದ ಐಎಸ್‌ಐ ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಬಂಧಿತನಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರು ಗ್ರೆನೇಡ್, 2 ಡಿಟೋನೆಟರ್ 13 ಕಾರ್ಟ್ರಿಡ್ಜ್‌ಗಳು ಮತ್ತು 1 ವಿದೇಶಿ ನಿರ್ಮಿತ ಪಿಸ್ತೂಲ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ಪ್ರದೇಶದ ಎಸ್ ಟಿಎಫ್ ಪೊಲೀಸರು ತಿಳಿಸಿದ್ದಾರೆ.