ಪಾಟ್ನಾ: ನಿಮ್ಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಮತ್ತು ಜೆಡಿ(ಯು) ವಿಭಜನೆಯಾಗದಂತೆ ತಡೆಯಲು ಲಾಲು ಪ್ರಸಾದ್ ಯಾದವ್ ಅವರು ಎರಡು ಬಾರಿ ಸಹಾಯ ಮಾಡಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಗುರುವಾರ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ತಿರುಗೇಟು ನೀಡಿದ್ದಾರೆ.
ಬಿಹಾರ ರಾಜಕಾರಣದ ಇತಿಹಾಸದ ಬಗ್ಗೆ ತೇಜಸ್ವಿ ಯಾದವ್ ಬಹಳಷ್ಟು ತಿಳಿದುಕೊಳ್ಳಬೇಕಿದೆ. ನಿಮ್ಮ ತಂದೆ ಇಂದು ಏನಾಗಿದ್ದಾರೋ ಅದಕ್ಕೆ ನಾನೇ ಕಾರಣ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದರು.
ನಿತೀಶ್ ಕುಮಾರ್ ಅವರ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ತೇಜಸ್ವಿ ಯಾದವ್, ರಾಜಕೀಯ ಲಾಭಕ್ಕಾಗಿ ನಿತೀಶ್ ಸತ್ಯ ಮರೆಮಾಚುತ್ತಿದ್ದಾರೆ. ನಿತೀಶ್ ರಾಜಕೀಯಕ್ಕೆ ಬರುವ ಮೊದಲು ನಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರು ಎರಡು ಬಾರಿ ಶಾಸಕರಾಗಿ ಮತ್ತು ಸಂಸದರಾಗಿ ಆಯ್ಕೆಯಾಗಿದ್ದರು ಎಂದು ತೇಜಸ್ವಿ ಹೇಳಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಲಾಲು ಅವರು ಹಲವಾರು ಪ್ರಧಾನಿಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
"ಇಂತಹ ವಿಷಯಗಳನ್ನು ಈಗ ವಿವರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ತೇಜಸ್ವಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ನಿತೀಶ್ ಕುಮಾರ್ ಅವರು ಪದೇ ಪದೇ ಮೈತ್ರಿಕೂಟ ಬದಲಾಯಿಸುವ ರಣನೀತಿಯನ್ನು ಟೀಕಿಸಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಇದರಿಂದ ಬಿಹಾರ ಅಭಿವೃದ್ಧಿಗೆ ತೀವ್ರ ಹೊಡೆತ ಬಿದ್ದಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ಸೂಕ್ತ ತಿರುಗೇಟು ನೀಡಿದ್ದ ನಿತೀಶ್ ಕುಮಾರ್, "ತೇಜಸ್ವಿ ಯಾದವ್ ಅವರಿಗೆ ಇತಿಹಾಸದ ಪಾಠ ಮಾಡುವ ಸಮಯ ಬಂದಿದೆ. ಈ ಹಿಂದೆ ಬಿಹಾರ ರಾಜಕಾರಣದಲ್ಲಿ ಏನೆಲ್ಲಾ ಆಗಿತ್ತು? ನಿಮ್ಮ(ತೇಜಸ್ವಿ ಯಾದವ್) ತಂದೆ ಲಾಲೂ ಪ್ರಸಾದ್ ಯಾದವ್ ಅವರ ರಾಜಕೀಯ ವೃತ್ತಿ ಜೀವನವನ್ನು ರೂಪಿಸುವಲ್ಲಿ ನಾನು ಯಾವ ರೀತಿ ನೆರವು ನೀಡಿದ್ದೇನೆ? ನಿಮ್ಮದೇ ಜಾತಿಯ ಜನರ ಆಕ್ಷೇಪಣೆ ಹೊರತಾಗಿಯೂ ನಾನು ಲಾಲೂ ಪ್ರಸಾದ್ ಯಾದವ್ ಅವರನ್ನು ಯಾವ ರೀತಿ ಬೆಂಬಲಿಸಿದೆ? ಇದೆಲ್ಲವನ್ನೂ ನೀವು ಚೆನ್ನಾಗಿ ತಿಳಿದುಕೊಳ್ಳಬೇಕು.." ಎಂದು ನಿತೀಶ್ ಕುಮಾರ್ ಯಾದವ್ ಅವರು ತೇಜಸ್ವಿ ಯಾದವ್ ಅವರನ್ನು ಉದ್ದೇಶಿಸಿ ಹೇಳಿದರು.