ನವದೆಹಲಿ: ಲೋಕಸಭಾ ಕ್ಷೇತ್ರಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆಯ ಕುರಿತು ತಮಿಳುನಾಡಿನ ಡಿಎಂಕೆ ಸರ್ಕಾರ ನಡೆಸುತ್ತಿರುವ ಹೋರಾಟದಲ್ಲಿ ಹಲವಾರು ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಈ ವಿಷಯದಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಮುಂಚೂಣಿ ಸ್ಥಾನದಲ್ಲಿ ಹೊರಹೊಮ್ಮುತ್ತಿರುವಂತೆ ತೋರುತ್ತಿದೆ.
ಕಾಂಗ್ರೆಸ್ ಆಡಳಿತವಿರುವ ತೆಲಂಗಾಣ ಮತ್ತು ಕರ್ನಾಟಕ ಸರ್ಕಾರಗಳು, ತೆಲಂಗಾಣದಲ್ಲಿ ವಿರೋಧ ಪಕ್ಷ ಬಿಆರ್‌ಎಸ್, ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ ಬಿಜೆಡಿ ಮತ್ತು ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಇದೇ ಮಾರ್ಚ್ 22 ರಂದು ಎಂ ಕೆ ಸ್ಟಾಲಿನ್ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತಿವೆ. ಎಂ ಕೆ ಸ್ಟಾಲಿನ್ ನೇತೃತ್ವದಲ್ಲಿ, ರಾಜಕೀಯ ಪಕ್ಷಗಳ ಒಗ್ಗಟ್ಟನ್ನು ವಿರೋಧ ಪಕ್ಷಗಳ ಏಕತೆಯ ಪ್ರದರ್ಶನವೆಂದು ಪರಿಗಣಿಸಲಾಗುತ್ತಿದೆ.
ನಿನ್ನೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್‌ನಿಂದ ಅನುಮತಿ ಪಡೆದ ನಂತರ ಚೆನ್ನೈ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದರು. ಎಂ ಕೆ ಸ್ಟಾಲಿನ್ ಅವರ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಸಭೆಯಲ್ಲಿ ಭಾಗವಹಿಸಲು ನಾನು ಕಾಂಗ್ರೆಸ್ ಹೈಕಮಾಂಡ್‌ನಿಂದ ಅನುಮತಿ ಪಡೆಯಬೇಕು. ತಾತ್ವಿಕವಾಗಿ, ನಾನು ಹಾಜರಾಗಲು ಒಪ್ಪಿಕೊಂಡಿದ್ದೇನೆ ಎಂದರು.
ಈ ತಿಂಗಳ ಆರಂಭದಲ್ಲಿ, ಎಂ ಕೆ ಸ್ಟಾಲಿನ್, ರೇವಂತ್ ರೆಡ್ಡಿ ಸೇರಿದಂತೆ ಏಳು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ವಿರುದ್ಧ ಜಂಟಿ ಕ್ರಿಯಾ ಸಮಿತಿಯನ್ನು ರಚಿಸುವಂತೆ ಪತ್ರ ಬರೆದಿದ್ದರು. ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ರಾಜ್ಯಗಳ ಪ್ರಾತಿನಿಧ್ಯವನ್ನು ಕಡಿತಗೊಳಿಸುವ ರೀತಿಯಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯನ್ನು ಜಾರಿಗೆ ತರುವ ಕೇಂದ್ರದ ಯಾವುದೇ ಕ್ರಮದ ವಿರುದ್ಧ 'ಏಕೀಕೃತ ಕ್ರಮ'ದತ್ತ ಮೊದಲ ಹೆಜ್ಜೆಯಾಗಿ ಚೆನ್ನೈ ಸಭೆಯನ್ನು ವಿಶ್ಲೇಷಿಸಲಾಗುತ್ತಿದೆ.
ತೆಲಂಗಾಣದಲ್ಲಿ ಬಿಆರ್‌ಎಸ್ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೂರವಿದ್ದರೂ, ಬಿಆರ್‌ಎಸ್ ನಾಯಕ ಕೆ ಟಿ ರಾಮರಾವ್ ಸಭೆಗೆ ಹಾಜರಾಗುವುದಾಗಿ ದೃಢಪಡಿಸಿದ್ದಾರೆ. ಡಿಎಂಕೆ ನಿಯೋಗವು ಆಂಧ್ರಪ್ರದೇಶದ ಆಡಳಿತಾರೂಢ ಟಿಡಿಪಿ ಮತ್ತು ಎನ್‌ಡಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷಕ್ಕೂ ಆಹ್ವಾನ ನೀಡಿದೆ. ಮೂಲಗಳ ಪ್ರಕಾರ, ಈ ವಿಷಯವನ್ನು ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಪಕ್ಷ ತಿಳಿಸಿದೆ.
ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೈಕಮಾಂಡ್‌ನಿಂದ ಅನುಮತಿ ಪಡೆದ ನಂತರ ಚೆನ್ನೈ ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಸಚಿವ ಕೆ ಎನ್ ನೆಹರು ನೇತೃತ್ವದ ಡಿಎಂಕೆ ನಿಯೋಗ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿತು
ಡಿ ಕೆ ಶಿವಕುಮಾರ್ ಕಳುಹಿಸಲು ಸಿದ್ದು ಒಲವು
ಡಿಎಂಕೆ ನಾಯಕರ ನಿಯೋಗಗಳು ಕರ್ನಾಟಕ ಸಿಎಂ ಸಿದ್ದರಾಮಯ್ಯ, ಮಾಜಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಬಿಜೆಡಿಯ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರಿದರು. ಚೆನ್ನೈ ಸಭೆಗೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಕಳುಹಿಸುವ ಯೋಜನೆಯಲ್ಲಿದ್ದಾರೆ.