ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ರಾಷ್ಟ್ರ ರಾಜಧಾನಿಯಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ(ಡಿಎನ್‌ಐ) ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿಯಾದರು.
ಇಂದು ಸಂಜೆ ದೆಹಲಿಯಲ್ಲಿ ತಮ್ಮನ್ನು ಭೇಟಿಯಾದ ತುಳಸಿ ಗಬ್ಬಾರ್ಡ್ ಅವರಿಗೆ ಪ್ರಧಾನಿ ಮೋದಿ ಇತ್ತೀಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಿಂದ ಸಂಗ್ರಹಿಸಿದ್ದ ಪವಿತ್ರ ಗಂಗಾಜಲವನ್ನು ನೀಡಿದರು.
ತುಳಸಿ ಗಬ್ಬಾರ್ಡ್ ಭೇಟಿಯಾದ ಫೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಗಬ್ಬಾರ್ಡ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಅಮೆರಿಕ ಮತ್ತು ಭಾರತ ಎರಡೂ ಭಯೋತ್ಪಾದನೆಯನ್ನು ಎದುರಿಸಲು ಮತ್ತು ಕಡಲ ಹಾಗೂ ಸೈಬರ್ ಭದ್ರತಾ ಸಹಕಾರವನ್ನು ಹೆಚ್ಚಿಸಲು ಬದ್ಧವಾಗಿವೆ ಎಂದು ಹೇಳಿದ್ದಾರೆ.
ಗಬ್ಬಾರ್ಡ್ ಅವರು ಮಾರ್ಚ್ 18 ರಂದು ದೆಹಲಿಯಲ್ಲಿ ಭದ್ರತಾ ಅಧಿಕಾರಿಗಳ ಬಹುರಾಷ್ಟ್ರೀಯ ಸಭೆಯಾದ ರೈಸಿನಾ ಸಂವಾದದಲ್ಲಿ ಭಾಗವಹಿಸುವುದರೊಂದಿಗೆ ಅವರ ಎರಡು ದಿನಗಳ ಭಾರತ ಪ್ರವಾಸ ಮುಕ್ತಾಯಗೊಳ್ಳಲಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗಿನ ಚರ್ಚೆಯ ನಂತರ ಗಬ್ಬಾರ್ಡ್ ಅವರು ಪ್ರಧಾನಿ ಮೋದಿ ಅವರರೊಂದಿಗೆ ಸಭೆ ನಡೆಸಿದರು.
ನಿನ್ನೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‌ಎಸ್‌ಎ) ಅಜಿತ್ ದೋವಲ್ ಅವರನ್ನು ಭೇಟಿಯಾಗಿದ್ದ ತುಳಸಿ ಗಬ್ಬಾರ್ಡ್ ಅವರು ಇಂದು ಬೆಳಗ್ಗೆ ದೆಹಲಿಯಲ್ಲಿ ಆಯೋಜಿಸಿದ್ದ ಜಾಗತಿಕ ಗುಪ್ತಚರ ಮುಖ್ಯಸ್ಥರ ಸಮಾವೇಶದಲ್ಲಿ ಭಾಗವಹಿಸಿದ್ದರು. ನಂತರ ರಾಜನಾಥ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಇದೀಗ ಸಂಜೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.