ಲಖನೌ: ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ ಅವರಿಗೆ ಸೀತಾಪುರದ ಸ್ಥಳೀಯ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 64 ರ ಅಡಿಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಮಾರ್ಚ್ 11 ರಂದೇ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ರಾಥೋಡ್ ಅವರಿಗೆ ಜಾಮೀನು ನೀಡಿತ್ತು.
ಆದರೆ, ಅದೇ ದಿನ, ಸೀತಾಪುರ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 69 (ವಂಚನೆಯಿಂದ ಲೈಂಗಿಕ ಸಂಭೋಗ) ಸೇರಿಸಿ ಚಾರ್ಜ್‌ಶೀಟ್ ಸಲ್ಲಿಸಿದರು. ಇದು ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.
ಈ ಬೆಳವಣಿಗೆಯು ರಾಥೋಡ್ ಅವರ ತಕ್ಷಣದ ಬಿಡುಗಡೆಗೆ ಅಡ್ಡಿಯಾಯಿತು ಮತ್ತು ಅವರು ಕೆಳ ನ್ಯಾಯಾಲಯದಲ್ಲಿ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಬೇಕಾಯಿತು.
ಮಂಗಳವಾರ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಗೌರವ್ ಪ್ರಕಾಶ್ ಅವರು, ಸೆಕ್ಷನ್ 69 ರಡಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ನೀಡಿದರು.
ನ್ಯಾಯಾಲಯದಲ್ಲಿ ಆರೋಪಿ ಪರವಾಗಿ ತಲಾ 1 ಲಕ್ಷ ರೂ.ಗಳ ಎರಡು ಜಾಮೀನು ಬಾಂಡ್‌ಗಳನ್ನು ಸಲ್ಲಿಸಲಾಯಿತು ಎಂದು ಸಂಸದರ ಪರ ವಕೀಲ ವಿಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ ಕಳೆದ ಜನವರಿ 30 ರಂದು ರಾಥೋಡ್ ಅವರನ್ನು ಬಂಧಿಸಲಾಯಿತು ಮತ್ತು ಅಂದಿನಿಂದ ಅವರು ಸೀತಾಪುರ ಜಿಲ್ಲಾ ಜೈಲಿನಲ್ಲಿದ್ದರು.
ಪೊಲೀಸರು ಮತ್ತು ಪ್ರಾಸಿಕ್ಯೂಷನ್ ಪ್ರಕಾರ, ಕಾಂಗ್ರೆಸ್ ಸಂಸದ ಮದುವೆಯಾಗುವ ನೆಪದಲ್ಲಿ 45 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಮತ್ತು ಆಕೆಯ ರಾಜಕೀಯ ಭವಿಷ್ಯಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.