ಮುಂಬೈ: ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ನಟಿ-ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಅವರ ವಿಚ್ಚೇಧನ ಅರ್ಜಿ ಸಲ್ಲಿಸಿದ ನಂತರ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಪುನರ್ ಮಿಲನಕ್ಕೆ ಅವಕಾಶವಿರುವ ಆರು ತಿಂಗಳ ಅವಧಿಯನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಗುರುವಾರ ಅವರ ವಿಚ್ಛೇದನ ಅರ್ಜಿಯನ್ನು ನಿರ್ಧರಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿದೆ.
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಾಗಿರುವುದರಿಂದ ಚಹಲ್ ಮಾರ್ಚ್ 21 ರಿಂದ ಲಭ್ಯವಿರುವುದಿಲ್ಲ ಎಂದು ನ್ಯಾಯಮೂರ್ತಿ ಮಾಧವ್ ಜಮ್ದಾರ್ ಅವರನ್ನೊಳಗೊಂಡ ಏಕಸದಸ್ಯ ಪೀಠ ಹೇಳಿದೆ.
ಕ್ರಿಕೆಟಿಗ ಚಹಾಲ್ ಮತ್ತು ವರ್ಮಾ ಈ ವರ್ಷ ಫೆಬ್ರವರಿ 5 ರಂದು ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ತೆಗೆದುಕೊಳ್ಳುತ್ತಿರುವುದರಿಂದ ಪುನರ್ ಮಿಲನದ ಅವಧಿಯನ್ನು ರದ್ದುಗೊಳಿಸಬೇಕು ಎಂದು ಅವರಿಬ್ಬರೂ ಅರ್ಜಿ ಸಲ್ಲಿಸಿದ್ದರು.
ಆದಾಗ್ಯೂ, ಫೆಬ್ರವರಿ 20 ರಂದು ಕೌಟುಂಬಿಕ ನ್ಯಾಯಾಲಯ, ಪುನರ್ ಮಿಲನಕ್ಕೆ ಅವಕಾಶವಾಗುವಂತಹ ಅವಧಿಯನ್ನು ರದ್ದುಗೊಳಿಸಲು ನಿರಾಕರಿಸಿತ್ತು. ನಂತರ ಇಬ್ಬರೂ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡುವ ಮೊದಲು ಎಲ್ಲಾ ದಂಪತಿಗಳು ಆರು ತಿಂಗಳ ಪುನರ್ ಮಿಲನಕ್ಕೆ ಅವಕಾಶವಾಗುವಂತಹ ಅವಧಿಯಲ್ಲಿ ಇಬ್ಬರು ಜೊತೆಯಲ್ಲಿರಬೇಕಾಗುತ್ತದೆ. ಹೈಕೋರ್ಟ್‌ನ ನ್ಯಾಯಮೂರ್ತಿ ಜಾಮದಾರ್ ಅವರು ಅರ್ಜಿಯನ್ನು ಅಂಗೀಕರಿಸಿದರು.
ಚಹಾಲ್ ಐಪಿಎಲ್‌ನಲ್ಲಿ ಭಾಗವಹಿಸುವ ಕಾರಣ ಮಾರ್ಚ್ 21 ರ ನಂತರ ಅವರು ಲಭ್ಯವಿರುವುದಿಲ್ಲ ಎಂದು ವಕೀಲರು ತಿಳಿಸುತ್ತಾರೆ. ಹೀಗಾಗಿ ಅವರ ವಿಚ್ಛೇದನ ಅರ್ಜಿಯನ್ನು ನಾಳೆಯೊಳಗೆ ತೀರ್ಮಾನಿಸುವಂತೆ ಕೌಟುಂಬಿಕ ನ್ಯಾಯಾಲಯವನ್ನು ಕೋರಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಚಹಾಲ್ ಮಾರ್ಚ್ 22 ರಂದು ಪ್ರಾರಂಭವಾಗಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ.