ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ 2022ರ ಮೇ ತಿಂಗಳಿನಿಂದ 2024ರ ಡಿಸೆಂಬರ್‌ವರೆಗೆ 38 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದು, ಈ ಪ್ರವಾಸಗಳಿಗೆ ಸುಮಾರು 258 ಕೋಟಿ ರೂ. ಖರ್ಚಾಗಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಈ ಉತ್ತರ ನೀಡಿದ್ದಾರೆ. ಕೇಂದ್ರ ಸರ್ಕಾರವು ಒದಗಿಸಿದ ಮಾಹಿತಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ವಿದೇಶಿ ಪ್ರವಾಸಗಳ ಖರ್ಚು ವೆಚ್ಚವನ್ನು ದೇಶವಾರು ವಿಂಗಡಿಸಿದೆ. ಈ ಪ್ರವಾಸಗಳಲ್ಲಿ ಅಧಿಕೃತ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಇತರರ ಖರ್ಚು ಸೇರಿದೆ.
ಜೂನ್ 2023 ರಲ್ಲಿ ಪ್ರಧಾನಿಯವರ ಅಮೆರಿಕ ಪ್ರವಾಸದ ಸಮಯದಲ್ಲಿ ಒಂದೇ ಭೇಟಿಗೆ ಅತಿ ಹೆಚ್ಚು ಎನ್ನುವಂತೆ 22 ಕೋಟಿ ಖರ್ಚು ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (ಎಂಒಎಸ್) ಪಬಿತ್ರಾ ಮಾರ್ಗರಿಟಾ ಉತ್ತರ ನೀಡಿದ್ದಾರೆ. ಈ ವರ್ಷಗಳಲ್ಲಿ ಪ್ರಧಾನಿ ಮೋದಿ ಜರ್ಮನಿ, ಕುವೈತ್, ಡೆನ್ಮಾರ್ಕ್, ಫ್ರಾನ್ಸ್, ಯುಎಇ, ಉಜ್ಬೇಕಿಸ್ತಾನ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಗ್ರೀಸ್, ಪೋಲೆಂಡ್, ಉಕ್ರೇನ್, ರಷ್ಯಾ, ಇಟಲಿ, ಬ್ರೆಜಿಲ್ ಹಾಗೂ ಗಯಾನಾ ದೇಶಗಳಿಗೆ ಭೇಟಿ ನೀಡಿದ್ದಾರೆ.
ಮೋದಿ ಅವರ ಪೋಲೆಂಡ್ ಭೇಟಿಗೆ 10.10 ಕೋಟಿ ಖರ್ಚಾಗಿದ್ದರೆ, ಉಕ್ರೇನ್ (2.52 ಕೋಟಿ), ರಷ್ಯಾ (5.34 ಕೋಟಿ), ಇಟಲಿ (14.36 ಕೋಟಿ), ಬ್ರೆಜಿಲ್ (5.51 ಕೋಟಿ) ಹಾಗೂ ಗಯಾನಾ (5.45) ದೇಶಗಳಿಗೆ ಪ್ರಮುಖ ವೆಚ್ಚವಾಗಿದೆ.
ಪ್ರಧಾನಮಂತ್ರಿ ಮೋದಿ ಅವರ ಪ್ರವಾಸಗಳ ಖರ್ಚನ್ನು ಹೋಲಿಕೆ ಮಾಡುವ ಸಲುವಾಗಿ, ಸರ್ಕಾರವು 2014ರ ಮೊದಲಿನ ಕೆಲವು ಪ್ರವಾಸಗಳ ದತ್ತಾಂಶವನ್ನು ಸಹ ಒದಗಿಸಿದೆ. 2011ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಮೆರಿಕಕ್ಕೆ ಭೇಟಿ ನೀಡಿದಾಗ 10.74 ಕೋಟಿ ರೂ. ಖರ್ಚಾಗಿತ್ತು.