ಚೆನ್ನೈ: ಕೇಂದ್ರ ಸರಕಾರದ ಉದ್ದೇಶಿತ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ಕುರಿತು ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ತಮಿಳುನಾಡು ಸಿಎಂ ಸ್ಟಾಲಿನ್ ಅವರು ಚನ್ನೈನಲ್ಲಿ ಇಂದು ಏರ್ಪಡಿಸಿರುವ ದಕ್ಷಿಣ ಭಾರತ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಚೆನ್ನೈಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕ್ಷೇತ್ರ ಪುನರ್ ವಿಂಗಡಣೆ ವಿವಾದ ಕುರಿತ ದಕ್ಷಿಣ ರಾಜ್ಯಗಳ ಪ್ರತಿನಿಧಿಗಳನ್ನು ಒಗ್ಗೂಡಿಸುವಲ್ಲಿ ಎಂಕೆ ಸ್ಟಾಲಿನ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅವರು ಈ ದೇಶದ ಒಕ್ಕೂಟ ಮತ್ತು ಸಂವಿಧಾನವನ್ನು ರಕ್ಷಿಸುತ್ತಿದ್ದಾರೆ ಎಂಬ ಹೆಮ್ಮೆ ನಮಗೆ ಇದೆ. ಮುಂದೆ ಏನು ಅನುಸರಿಸಬೇಕು ಹಾಗೂ ಹೇಗೆ ಒಗ್ಗೂಡಿ ಕೆಲಸ ಮಾಡಬೇಕು ಎಂಬುದರ ಕುರಿತು ನಾವೆಲ್ಲರೂ ಚರ್ಚಿಸುತ್ತೇವೆ ಎಂದರು.
ತೆಲಂಗಾಣ, ಪಂಜಾಬ್, ಕೇರಳದ ನಾಯಕರು ಸೇರಿದಂತೆ ನಾವೆಲ್ಲರೂ ಇಲ್ಲಿ ಸೇರಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ದೇಶವನ್ನು ನಿರಾಸೆಗೊಳಿಸುವುದಿಲ್ಲ ಮತ್ತು ನಮ್ಮ ಸ್ಥಾನಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ನಮ್ಮದು ಬಹಳ ಪ್ರಗತಿಪರ ರಾಜ್ಯವಾಗಿದ್ದು, ಆರ್ಥಿಕವಾಗಿ ಮತ್ತು ಸಾಕ್ಷರತೆಯಲ್ಲಿ ಗಟ್ಟಿಯಾಗಿ ನಿಂತಿದ್ದೇವೆ ಎಂದು ಹೇಳಿದರು.
ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುತ್ತೇವೆ. ಈ ಮೂಲಕ ನಮ್ಮ ಯಾವುದೇ ಸೀಟು ಕಡಿಮೆಯಾಗದಂತೆ ನೋಡಿಕೊಳ್ಳುತ್ತೇವೆ. ಎಲ್ಲಾ ಬಿಜೆಪಿ ಕಪ್ಪು ಬಾವುಟಗಳನ್ನು ನಾನು ಸ್ವಾಗತಿಸುತ್ತೇನೆ. ಅವರು ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದರೂ ನಾನು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.