ಕೋಟಾ (ರಾಜಸ್ಥಾನ): ಝಲಾವರ್ ಜಿಲ್ಲೆಯ ಬಕಾನಿ ಪಟ್ಟಣದಲ್ಲಿ ನಡೆದ ಕೌಟುಂಬಿಕ ಕಲಹದ ವೇಳೆ ಕೋಪಗೊಂಡ ಮಹಿಳೆಯೊಬ್ಬರು ತಮ್ಮ ಪತಿಯ ನಾಲಿಗೆಯನ್ನೇ ಕಚ್ಚಿರುವ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2) ಮತ್ತು 118(2) ರ ಅಡಿಯಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವ ಮತ್ತು ಗಂಭೀರ ಗಾಯಗಳನ್ನು ಉಂಟುಮಾಡಿದ ಆರೋಪದ ಮೇಲೆ ರವಿನಾ ಸೈನ್ (23) ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಸಹಾಯಕ ಸಬ್-ಇನ್ಸ್‌ಪೆಕ್ಟರ್ ಬ್ರಿಜ್‌ರಾಜ್ ಸಿಂಗ್ ಅವರ ಪ್ರಕಾರ, ಬಕಾನಿ ಪಟ್ಟಣದ ಕನ್ಹಯಾಲಾಲ್ ಸೈನ್ (25) ಮತ್ತು ಹತ್ತಿರದ ಸುನೆಲ್ ಗ್ರಾಮದ ರವಿನಾ ಸೈನ್ ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ನಡುವೆ ಹೊಂದಾಣಿಕೆ ಇರಲಿಲ್ಲ ಮತ್ತು ಆಗಾಗ್ಗೆ ಜಗಳವಾಡುತ್ತಿದ್ದರು. ಗುರುವಾರ ರಾತ್ರಿಯೂ ಜಗಳವಾಡಿದ್ದಾರೆ. ಮಹಿಳೆ ಕೋಪದಿಂದ ಕನ್ಹಯಾಲಾಲ್ ಅವರ ನಾಲಿಗೆಯ ಒಂದು ಭಾಗವನ್ನು ಕಚ್ಚಿದ್ದಾಳೆ ಎಂದಿದ್ದಾರೆ.
ಕುಟುಂಬ ಸದಸ್ಯರು ಕನ್ಹಯಾಲಾಲ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಝಾಲಾವರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಎಸ್ಐ ತಿಳಿಸಿದ್ದಾರೆ.
ಅರ್ಧ ತುಂಡಾಗಿದ್ದ ನಾಲಿಗೆಯನ್ನು ಮತ್ತೆ ಹೊಲಿಯಬಹುದು ಎಂದು ವೈದ್ಯರು ತಿಳಿಸಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಘಟನೆ ನಂತರ, ರವಿನಾ ಕೋಣೆಯ ಬಾಗಿಲು ಮುಚ್ಚಿಕೊಂಡು ಕುಡಗೋಲಿನಿಂದ ತನ್ನ ಕೈಯನ್ನು ಕುಯ್ದುಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಕುಟುಂಬ ಸದಸ್ಯರು ಆಕೆಯನ್ನು ತಡೆದಿದ್ದಾರೆ ಎಂದು ಎಂದು ಎಎಸ್ಐ ಹೇಳಿದರು.
ಕನ್ಹಯಾಲಾಲ್ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಸದ್ಯ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರ ಹೇಳಿಕೆಗಳನ್ನು ಇನ್ನೂ ದಾಖಲಿಸಿಕೊಂಡಿಲ್ಲ ಎಂದು ಅವರು ಹೇಳಿದರು.