ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಸ್ಟ್ಯಾಂಡ್ ಅಪ್ ಕಾಮಿಡಿಯಿನ್ ಕುನಾಲ್ ಕಾಮ್ರಾಗೆ ಶಿವಸೇನಾ ಯುವ ಸೇನಾ (ಶಿಂಧೆ ಬಣ) ಪ್ರಧಾನ ಕಾರ್ಯದರ್ಶಿ ರಾಹೂಲ್ ಕನಾಲ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಇದು ಕೇವಲ ಟ್ರೈಲರ್ ಅಷ್ಟೇ, ಸಿನಿಮಾ ಇನ್ನೂ ಬಾಕಿಯಿದೆ ಎಂದು ವಾರ್ನಿಂಗ್ ನೀಡಿದ್ದಾರೆ.
ಇದು ಯಾವುದೇ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿಲ್ಲ. ಇದು ಸಂಪೂರ್ಣವಾಗಿ ಸ್ವಾಭಿಮಾನಕ್ಕೆ ಸಂಬಂಧಿಸಿದೆ. ದೇಶದ ಹಿರಿಯರು ಅಥವಾ ಗಣ್ಯ ನಾಗರಿಕರ ವಿಷಯಕ್ಕೆ ಬಂದಾಗ. ಹಿರಿಯರನ್ನು ಗುರಿಯಾಗಿಸಿದಾಗ, ನೀವು ಅಂತಹ ಮನಸ್ಥಿತಿಯ ಯಾರನ್ನಾದರೂ ಗುರಿಯಾಗಿಸುತ್ತೀರಿ. ಕುನಾಲ್ ಕಾಮ್ರಾಗೆ ಸಂದೇಶವು ಸ್ಪಷ್ಟವಾಗಿದೆ. ಇದು ಕೇವಲ ಟ್ರೈಲರ್ ಅಷ್ಟೇ, ಸಿನಿಮಾ ಇನ್ನೂ ಬಾಕಿಯಿದೆ. ಮುಂಬೈನಲ್ಲಿದ್ದಾಗಲೆಲ್ಲಾ ಶಿವಸೇನೆ ಶೈಲಿಯಲ್ಲಿ ನಿಮಗೆ ಒಳ್ಳೆಯ ಪಾಠ ಸಿಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕುನಾಲ್ ಕಾಮ್ರಾ ಮತ್ತು ಶಿವಸೇನೆಯ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾದ ನಂತರ, ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಅವರು ಹೇಳಿದ್ದಾರೆ."ನಾವು ದೂರು ನೀಡಿದ್ದೇವೆ. ಹ್ಯಾಬಿಟಾಟ್ ಮಾಲೀಕರಿಗೆ ಕರೆ ಮಾಡಿ, ಈ ಸ್ಥಳದ ವಿರುದ್ಧ ಈ ಹಿಂದೆ 6 ಎಫ್‌ಐಆರ್ ದಾಖಲಾಗಿರುವುದನ್ನು ಹೇಳಿದ್ದೇವೆ. ಕುನಾಲ್ ಕಮ್ರಾಗೆ ತಕ್ಕ ಪಾಠ ಕಲಿಸುತ್ತೇವೆ. ಇದು ಹಣ ಪಡೆದು ಮಾಡಿರುವ ಪಿತೂರಿಯಾಗಿದೆ. ಅದನ್ನು ಬಹಿರಂಗಪಡಿಸಲು ಮುಂಬೈ ಪೊಲೀಸರು ಸಮರ್ಥರಾಗಿದ್ದಾರೆ ಎಂದು ಕನಾಲ್ ಹೇಳಿದ್ದಾರೆ.
ರಾಹೂಲ್ ಕನಾಲ್ ಮತ್ತು ಇತರ 19 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮುಂಬೈನಲ್ಲಿ ಹ್ಯಾಬಿಟಾಟಾ ಸ್ಟ್ಯಾಂಡ್‌ಅಪ್ ಕಾಮಿಡಿ ಸೆಟ್ ಅನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಸ್ಟ್ಯಾಂಡ್‌ಅಪ್ ಕಾಮಿಡಿಯನ್ ರಜತ್ ಸೂದ್ ಅವರ ಲೈವ್ ಶೋ ನಡೆಯುತ್ತಿದ್ದಾಗ ಅಲ್ಲಿಗೆ ಧಾವಿಸಿದ ಶಿಂಧೆ ಸೇನೆಯ ಯುವ ಬಣವು ಶೋವನ್ನು ಮುಚ್ಚುವಂತೆ ಒತ್ತಾಯಿಸಿತು ಮತ್ತು ಸೆಟ್ ಅನ್ನು ಧ್ವಂಸಗೊಳಿಸಿತು ಎಂದು ಖಾರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಜಯ್ ಹೇಳಿದ್ದಾರೆ.
ಈ ಸಂಬಂಧ ಭಾರತೀಯ ಸಂಹಿತೆಯ ಸೆಕ್ಷನ್ 132, 189(2), 189(3), 190, 191(2), 324(5), 324(6), 223, 351 (2), 352, 333, 37(1) ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆ 135 ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದೆ