ಮಹಾರಾಷ್ಟ್ರ: ರಾಯಗಢ ಕೋಟೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಸಮಾಧಿ ಬಳಿ ಇರುವ ಶ್ವಾನ ಸ್ಮಾರಕವನ್ನು ತೆರವುಗೊಳಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕೊಲ್ಹಾಪುರ ರಾಜಮನೆತನದ ವಂಶಸ್ಥ ಸಂಭಾಜಿರಾಜೆ ಛತ್ರಪತಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾರ್ಚ್ 22 ರಂದು ಅವರು ಪತ್ರ ಬರೆದಿದ್ದು, ಈ ವರ್ಷದ ಮೇ 31ಕ್ಕೂ ಮುನ್ನಾ ಶ್ವಾನ ಸ್ಮಾರಕವನ್ನು ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದ ರಾಯಗಢ ಕೋಟೆಯಲ್ಲಿ ವಾಘ್ಯಾ ಎಂಬ ಶ್ವಾನದ ಸ್ಮಾರಕವನ್ನು ನಿರ್ಮಿಸಲಾಗಿತ್ತು. ಆದರೆ, ಶಿವಾಜಿ ಮಹಾರಾಜರ ಮುದ್ದಿನ ಶ್ವಾನ 'ವಾಘ್ಯಾ'ಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳಿಲ್ಲ. ಅಂತಹ ಯಾವುದೇ ಪುರಾವೆಗಳಿಲ್ಲದ ಕಾರಣ ಇದು ಪಾರಂಪರಿಕ ಕೋಟೆಯಾಗಿ ಸಂರಕ್ಷಿಸಲಾಗಿರುವ ಕೋಟೆಯ ಮೇಲಿನ ಅತಿಕ್ರಮಣವಾಗಿದೆ ಎಂದು ಅವರು ಹೇಳಿದ್ದಾರೆ.
ಶ್ವಾನ ಕುರಿತು ಯಾವುದೇ ಪುರಾವೆ ಅಥವಾ ಲಿಖಿತ ಪುರಾವೆಗಳಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಇದು ದುರಾದೃಷ್ಟಕರ ಮತ್ತು ಮಹಾನ್ ಶಿವಾಜಿ ಮಹಾರಾಜರ ಪರಂಪರೆಯನ್ನು ಅವಮಾನಿಸುತ್ತದೆ ಎಂದು ಮಾಜಿ ಸಂಸದರು ಹೇಳಿದ್ದಾರೆ.
100 ವರ್ಷಗಳಿಗಿಂತಲೂ ಹಳೆಯದಾದ ಕಟ್ಟಡವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನೀತಿಯ ಪ್ರಕಾರ ರಕ್ಷಿಸಲಾಗಿದೆ. ವಾಘ್ಯಾ ಸ್ಮಾರಕ ಎಂದು ಹೆಸರು ಗಳಿಸುವ ಮುನ್ನಾ ಅದನ್ನು ತೆರವುಗೊಳಿಸಬೇಕು ಎಂದು ಸಂಭಾಜಿರಾಜೆ ಒತ್ತಾಯಿಸಿದ್ದಾರೆ.