ಕುನಾಲ್ ಕಾಮ್ರಾ 
ದೇಶ

ವಾರಕ್ಕೆ 70 ಗಂಟೆ ಕೆಲಸ ಮಾಡುವುದು ನಾರಾಯಣ ಮೂರ್ತಿಗೆ ಯಾಕಿಷ್ಟ?: ಕಾಮಿಡಿಯನ್ ಕುನಾಲ್ ಕಾಮ್ರಾ ಹೇಳಿದ್ದೇನು?

ತಮ್ಮ 45 ನಿಮಿಷಗಳ ಕಾರ್ಯಕ್ರಮದಲ್ಲಿ, ಕುನಾಲ್ ಕಾಮ್ರಾ ಅವರು ಸುಧಾ ಮೂರ್ತಿಯವರ 'ಸರಳ' ಜೀವನಶೈಲಿ ಮತ್ತು ನಾರಾಯಣ ಮೂರ್ತಿಯವರ ವಾರಕ್ಕೆ 70 ಗಂಟೆ ಕೆಲಸದ ಕುರಿತಾದ ಹೇಳಿಕೆಗಳನ್ನು ಟೀಕಿಸಿದ್ದಾರೆ.

ನವದೆಹಲಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ. ತಮ್ಮ ಇತ್ತೀಚಿನ 'ನಯಾ ಭಾರತ್' ಕಾರ್ಯಕ್ರಮದಲ್ಲಿ, ಲೇಖಕಿ ಮತ್ತು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮತ್ತು ಅವರ ಪತಿ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳನ್ನು ಲೇವಡಿ ಮಾಡಿದ್ದಾರೆ. ತಮ್ಮ 45 ನಿಮಿಷಗಳ ಕಾರ್ಯಕ್ರಮದಲ್ಲಿ, ಕುನಾಲ್ ಕಾಮ್ರಾ ಅವರು ಸುಧಾ ಮೂರ್ತಿಯವರ 'ಸರಳ' ಜೀವನಶೈಲಿ ಮತ್ತು ನಾರಾಯಣ ಮೂರ್ತಿಯವರ ವಾರಕ್ಕೆ 70 ಗಂಟೆ ಕೆಲಸದ ಕುರಿತಾದ ಹೇಳಿಕೆಗಳನ್ನು ಟೀಕಿಸಿದ್ದಾರೆ.

'ಶ್ರೀಮಂತರಾಗಿರುತ್ತಾರೆ ಆದರೆ, ಮಧ್ಯಮ ವರ್ಗಕ್ಕೆ ಸೇರಿದವರಂತೆ ನಟಿಸುತ್ತಾರೆ' ಎಂದು ದೇಶದ ಶ್ರೀಮಂತ ಜನರ ಪ್ರಕಾರಗಳ ಬಗ್ಗೆ ಕುನಾಲ್ ಕಾಮ್ರಾ ಮಾತನಾಡಿದ್ದಾರೆ. ಸುಧಾ ಮೂರ್ತಿ ಅವರು 'ಸರಳ ಎಂದು ಹೇಳಿಕೊಳ್ಳುವವರಲ್ಲಿ ಒಬ್ಬರು' ಎಂದು ಅವರು ಹೇಳಿದರು.

'ಮಧ್ಯಮ ವರ್ಗದವರಂತೆ ನಟಿಸುವ ಶ್ರೀಮಂತರಲ್ಲಿ, ಸುಧಾ ಮೂರ್ತಿ ಎಂಬ ಮಹಾನ್ ಮಹಿಳೆ ಇದ್ದಾರೆ. ಅವರು ಸರಳತೆಯ ಪ್ರತಿರೂಪ. ಅವರು ಸರಳರು ಎಂಬುದು ಅವರ ವಾದ. ಅವರು ತಮ್ಮ ಸರಳತೆ ಕುರಿತು 50 ಪುಸ್ತಕಗಳನ್ನು ಬರೆದಿದ್ದಾರೆ. ಯಾವುದೇ ವಿಮಾನ ನಿಲ್ದಾಣದಲ್ಲಿ ನೋಡಿದರೂ, ಸುಧಾ ಮೂರ್ತಿ ಅವರಿಗೆ ಮೀಸಲಾಗಿರುವ ಪುಸ್ತಕ ವಿಭಾಗವನ್ನು ನೀವು ಕಾಣಬಹುದು ಮತ್ತು ಅಲ್ಲಿರುವ ಪ್ರತಿ ಪುಸ್ತಕದ ವಿಷಯವೆಂದರೆ ಅವರು ಸರಳರು' ಎಂಬುದಾಗಿದೆ ಎಂದರು.

'ಒಮ್ಮೆ, ನಾನು (ಸುಧಾ ಮೂರ್ತಿ) ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದವರ ಬಳಿಗೆ ಹೋದೆ, ಮತ್ತು ಆತ ನನಗೆ 100 ರೂ.ಗೆ ಎಂಟು ಮಾವಿನ ಹಣ್ಣುಗಳನ್ನು ನೀಡಿದನು. ನಂತರ, ಒಬ್ಬ ಮಹಿಳೆ ಕಾರ್ಪೊರೇಟ್ ಉಡುಪಿನಲ್ಲಿ ಬಂದರು ಮತ್ತು ಮಾರಾಟಗಾರ ಆಕೆಗೆ ಎಂಟು ಮಾವಿನ ಹಣ್ಣುಗಳನ್ನು 150 ರೂ.ಗೆ ಕೊಟ್ಟನು. ನಾನು ಆತನ ಬಳಿಗೆ ಹೋಗಿ, 'ನೀವು ನನಗೆ ಕಡಿಮೆ ಬೆಲೆಗೆ ಮಾವಿನ ಹಣ್ಣನ್ನು ಏಕೆ ಕೊಟ್ಟಿದ್ದೀರಿ?' ಎಂದು ಕೇಳಿದೆ. ಅದಕ್ಕೆ ಆತ, ಆ ಮಹಿಳೆ ಇನ್ಫೋಸಿಸ್ ಎಂಬ ಅಂತರರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿದರು' ಎಂದು ಸುಧಾ ಮೂರ್ತಿಯವರ ಕಥೆಯನ್ನು ಅನುಕರಿಸಿದರು.

'ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಲು ಏಕೆ ಬಯಸುತ್ತಾರೆಂದು ಈಗ ನಿಮಗೆ ಅರ್ಥವಾಗಿದೆಯೇ? ಸುಧಾ ಮೂರ್ತಿ ಅವರು 'ಮೈ ಸಿಂಪಲ್ ಹುಂ' (ನಾನು ಸಿಂಪಲ್) ಎಂದು ಆಗ್ಗಾಗ್ಗೆ ಹೇಳುತ್ತಲೇ ಇರುತ್ತಾರೆ. ಅವರ ಸರಳತೆಯು ನಾರಾಯಣ ಮೂರ್ತಿಯವರಿಗೆ ಸಂಕಷ್ಟದಂತೆ ಕಂಡಿದೆ. ಹೀಗಾಗಿಯೇ ನಾರಾಯಣ ಮೂರ್ತಿ ಅವರು 'ಮೈ ಘರ್ ಕೆ ಬಾಹರ್ ಹು' (ನಾನು ಮನೆಯಿಂದ ಹೊರಗಿದ್ದೇನೆ) ಎಂದು ಹೇಳುತ್ತಾರೆ. ಅಂದರೆ, ಅವರು ಹೆಚ್ಚಾಗಿ ಕೆಲಸದಲ್ಲಿ ಮುಳುಗಿರುತ್ತಾರೆ' ಎಂದರು.

ಭಾರತೀಯ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಕಳೆದ ವರ್ಷ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಬಳಿಕ ಮುಂಬೈನ ಎಎಂಸಿಯ ಕಿಲಾಚಂದ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡುವಾಗ ಸ್ಪಷ್ಟನೆ ನೀಡಿದ್ದ ಅವರು, ಯಾರೊಬ್ಬರು ಯಾರ ಮೇಲೂ ಒತ್ತಾಯಪೂರ್ವಕವಾಗಿ ಅದನ್ನು ಹೇರುವಂತಿಲ್ಲ ಎಂದಿದ್ದರು.

ಸುಧಾ ಮೂರ್ತಿಯವರ ಬಗ್ಗೆ ಮಾತು ಮುಂದುವರಿಸಿದ ಕುನಾಲ್ ಕಾಮ್ರಾ, 'ಎರಡು ವರ್ಷ ಅವರು ಇಡೀ ಯುಕೆಯ ಅತ್ತೆಯಾಗಿದ್ದರು. ಈ ಸರಳತೆ ಹೇಗಿದೆ? ಅವರು ರಾಜ್ಯಸಭೆಗೆ ಹೋಗುತ್ತಿದ್ದಾರೆ. ಅದು ಕೂಡ ಸರಳವಾಗಿ' ಎಂದರು.

ಏಕನಾಥ್ ಶಿಂಧೆ ವಿರುದ್ಧದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಕಾರ್ಯಕರ್ತರು ಮುಂಬೈನ ಖಾರ್‌ ಪ್ರದೇಶದ ಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸಗೊಳಿಸಿದ್ದಾರೆ. ಸ್ಟ್ಯಾಂಡ್‌ಅಪ್ ಕಾಮಿಡಿಯನ್ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ ಮತ್ತು 36 ವರ್ಷದ ಹಾಸ್ಯನಟನಿಗೆ ಬೆದರಿಕೆ ಹಾಕಿದ್ದಾರೆ.

ಕುನಾಲ್ ಕಾಮ್ರಾ ವಿರುದ್ಧ ಮಾನನಷ್ಟ ಮೊಕದ್ದಮೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ಹೇಳಿಕೆಗಳು ಸೇರಿದಂತೆ ಹಲವು ಆರೋಪಗಳಿವೆ. ಮುಂಬೈ ಪೊಲೀಸರು ಶಿವಸೇನೆಯ ಕೆಲವು ಬೆಂಬಲಿಗರ ವಿರುದ್ಧವೂ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.

ಹಾಸ್ಯನಟ ಈಗ ಬಂಧನದಿಂದ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT