ಸೋನಿಯಾ ಗಾಂಧಿ 
ದೇಶ

'ಭಾರತದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಕಗ್ಗೊಲೆ ಕೊನೆಗೊಳ್ಳಬೇಕು': NEP ಕುರಿತು ಮೋದಿ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ

ತಮ್ಮ ಲೇಖನದಲ್ಲಿ ಅವರು ಎಲ್ಲಿಯೂ ತಮಿಳುನಾಡು ಅಥವಾ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಉಲ್ಲೇಖಿಸಿಲ್ಲ.

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅಡಿಯಲ್ಲಿ ಶಾಲೆಗಳಲ್ಲಿ ಹಿಂದಿ ಹೇರಿಕೆ ಕುರಿತು ಕೇಂದ್ರ ಮತ್ತು ತಮಿಳುನಾಡು ನಡುವೆ ಜಟಾಪಟಿ ನಡೆಯುತ್ತಿರುವ ನಡುವಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದಿ ಹಿಂದೂಗೆ ಬರೆದ ಲೇಖನದಲ್ಲಿ ಎನ್ಇಪಿ ಕುರಿತು ಸೋನಿಯಾ ಗಾಂಧಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ತನ್ನ ಕೇಂದ್ರೀಕರಣ, ವಾಣಿಜ್ಯೀಕರಣ ಮತ್ತು ಕೋಮುವಾದೀಕರಣದ ಮೂಲ ಕಾರ್ಯಸೂಚಿಯನ್ನು ಮುಂದಕ್ಕೆ ತಳ್ಳಲು ಎನ್‌ಇಪಿ 2020 ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸೋನಿಯಾ ಅವರು ಆರೋಪಿಸಿದ್ದಾರೆ.

ಉನ್ನತ ಮಟ್ಟದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಪರಿಚಯವು ಭಾರತದ ಮಕ್ಕಳು ಮತ್ತು ಯುವಕರ ಶಿಕ್ಷಣದ ಬಗ್ಗೆ ತೀವ್ರವಾಗಿ ಅಸಡ್ಡೆ ಹೊಂದಿರುವುದನ್ನು ತೋರಿಸುತ್ತಿದೆ. ಕಳೆದ ದಶಕದಲ್ಲಿ, ಶಿಕ್ಷಣದಲ್ಲಿ, ಅದರ ಪ್ರಾಥಮಿಕ ಕಾಳಜಿ 3 ಪ್ರಮುಖ ಕಾರ್ಯಸೂಚಿ ಅಂಶಗಳನ್ನು ಜಾರಿಗೆ ತರುವುದು ಎಂದು ಅದರ ದಾಖಲೆಯು ತೋರಿಸಿದೆ. ಅಧಿಕಾರದ ಕೇಂದ್ರೀಕರಣ, ಖಾಸಗಿ ವಲಯದ ಹೊರಗುತ್ತಿಗೆ ಮೂಲಕ ವಾಣಿಜ್ಯೀಕರಣ ಮತ್ತು ಪಠ್ಯಪುಸ್ತಕಗಳು, ಪಠ್ಯಕ್ರಮ ಮತ್ತು ಸಂಸ್ಥೆಗಳ ಕೋಮುವಾದೀಕರಣವಾಗಿದೆ ಎಂದು ಬರೆದಿದ್ದಾರೆ.

ಎನ್‌ಇಪಿ ಮೂಲಕ ಹಿಂದಿ ಹೇರಿಕೆಗೆ ಯತ್ನಿಸಲಾಗುತ್ತಿದೆ ಎಂಬ ಆರೋಪದ ಮೇಲೆ ತಮಿಳುನಾಡು ಸರ್ಕಾರ ಮತ್ತು ಕೇಂದ್ರದ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯವರು ಹೇಳಿಕೆ ನೀಡಿದ್ದಾರೆ. ಆದರೆ, ತಮ್ಮ ಲೇಖನದಲ್ಲಿ ಅವರು ಎಲ್ಲಿಯೂ ತಮಿಳುನಾಡು ಅಥವಾ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಉಲ್ಲೇಖಿಸಿಲ್ಲ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಈ ನೀತಿಯನ್ನು ಬಲವಾಗಿ ವಿರೋಧಿಸಿದ್ದು, ತಮಿಳುನಾಡು ಹಿಂದಿ ಹೇರಿಕೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರತಿಪಾದಿಸಿದ್ದರು. ಈ ಮಧ್ಯೆ, ಡಿಎಂಕೆಯ ಮಿತ್ರಪಕ್ಷವಾದ ಕಾಂಗ್ರೆಸ್, “ಹಿಂದಿಯನ್ನು ಆಯ್ಕೆಯಿಂದ ಕಲಿಯಬಹುದು. ಆದರೆ, ಹೇರಿಕೆಯಿಂದ ಅಲ್ಲ” ಎಂದು ಹೇಳುವ ಮೂಲಕ ತನ್ನ ಧೃಡ ನಿಲುವನ್ನು ಸ್ಪಷ್ಟಪಡಿಸಿದೆ.

ನಿರ್ಣಾಯಕ ನೀತಿ ನಿರ್ಧಾರಗಳಿಂದ ರಾಜ್ಯ ಸರ್ಕಾರಗಳನ್ನು ಹೊರಗಿಡುವ ಮೂಲಕ ಕೇಂದ್ರ ಸರ್ಕಾರವು ಶಿಕ್ಷಣದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುತ್ತಿದೆ. ಕಳೆದ 11 ವರ್ಷಗಳಿಂದ ಈ ಸರ್ಕಾರದ ಕಾರ್ಯನಿರ್ವಹಣೆಯ ನಿರ್ಣಾಯಕ ಲಕ್ಷಣವೆಂದರೆ ಅನಿಯಂತ್ರಿತ ಕೇಂದ್ರೀಕರಣ. ಆದರೆ, ಅದರ ಅತ್ಯಂತ ಹಾನಿಕಾರಕ ಪರಿಣಾಮ ಶಿಕ್ಷಣ ಕ್ಷೇತ್ರದಲ್ಲಿದೆ. ಕೇಂದ್ರ ಮತ್ತು ರಾಜ್ಯ ಶಿಕ್ಷಣ ಮಂತ್ರಿಗಳನ್ನು ಒಳಗೊಂಡ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯನ್ನು ಸೆಪ್ಟೆಂಬರ್ 2019 ರಿಂದ ಕರೆಯಲಾಗಿಲ್ಲ.

ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸದೆ ಕೇಂದ್ರ ಸರ್ಕಾರವು ಎನ್‌ಇಪಿ 2020 ಅನ್ನು ಏಕಪಕ್ಷೀಯವಾಗಿ ಜಾರಿಗೆ ತಂದಿದೆ. ಶಿಕ್ಷಣವನ್ನು ಮೂಲಭೂತವಾಗಿ ಮರುರೂಪಿಸುವ ನೀತಿಯನ್ನು ಪರಿಚಯಿಸಿದರೂ, ಕೇಂದ್ರ ಸರ್ಕಾರವು ಅದರ ಅನುಷ್ಠಾನದ ಕುರಿತು ಒಮ್ಮೆಯೂ ರಾಜ್ಯ ಸರ್ಕಾರಗಳಿಂದ ಸಲಹೆಗಳನ್ನು ಕೇಳಿಲ್ಲ. ಶಿಕ್ಷಣವು ಸಂವಿಧಾನದ ಸಮಕಾಲೀನ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವಿದೆ. ಸರ್ಕಾರವು ಪ್ರಜಾಪ್ರಭುತ್ವ ಸಮಾಲೋಚನೆಯನ್ನು ಕಡೆಗಣಿಸುತ್ತಿದೆ. ವೈವಿಧ್ಯಮಯ ಪ್ರಾದೇಶಿಕ ದೃಷ್ಟಿಕೋನಗಳನ್ನು ಪರಿಗಣಿಸದೆ ನೀತಿಗಳನ್ನು ಹೇರುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಕ್ರಮಗಳು ಸಂವಿಧಾನಾತ್ಮಕವಾಗಿ ಖಾತರಿಪಡಿಸಿದ ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯುವ ಬದಲು, ರದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸರ್ಕಾರದ ನಡೆಯನ್ನು ಎತ್ತಿ ತೋರಿಸುತ್ತಿದೆ.

ಶಿಕ್ಷಣ ವ್ಯವಸ್ಥೆಯ ಮೂಲಕ ದ್ವೇಷವನ್ನು ಬೋಧಿಸುವ ಮತ್ತು ಬೆಳೆಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷದ ದೀರ್ಘಕಾಲೀನ ಸೈದ್ಧಾಂತಿಕ ಚಿಂತನೆಯನ್ನು ನೆರವೇರಿಕೆಗೆ ಸರ್ಕಾರ ಮುಂದಾಗುತ್ತಿದೆ.

ಶಾಲಾ ಪಠ್ಯಕ್ರಮದ ಬೆನ್ನೆಲುಬಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದು, ಮಹಾತ್ಮ ಗಾಂಧಿಯವರ ಹತ್ಯೆ ಮತ್ತು ಮೊಘಲ್ ಕುರಿತ ಪಠ್ಯಕ್ರಮಗಳನ್ನು ಕೈಬಿಟ್ಟಿದೆ. ಇದಲ್ಲದೆ, ಭಾರತೀಯ ಸಂವಿಧಾನದ ಮುನ್ನುಡಿಯನ್ನೂ ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ, ಆಡಳಿತ-ಸ್ನೇಹಿ ಸೈದ್ಧಾಂತಿಕ ಹಿನ್ನೆಲೆಯಿಂದ ಪ್ರಾಧ್ಯಾಪಕರನ್ನು ದೊಡ್ಡ ಪ್ರಮಾಣದಲ್ಲಿ ನೇಮಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ, ಆದರೆ, ಇಂದು ಪ್ರಾಧ್ಯಾಪಕರು ಮತ್ತು ಉಪಕುಲಪತಿಗಳ ಅರ್ಹತೆಗಳನ್ನು ದುರ್ಬಲಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಹೊಸ ಯುಜಿಸಿ ಮಾರ್ಗಸೂಚಿಯಲ್ಲಿನ ಬದಲಾವಣೆಗಳು ಇಂದಿನ ಕಾಲದಲ್ಲಿನ ಒಕ್ಕೂಟ ವ್ಯವಸ್ಥೆಗೆ ಇರುವ ಅತ್ಯಂತ ಗಂಭೀರ ಬೆದರಿಕೆಗಳಲ್ಲಿ ಒಂದಾಗಿದೆ. ಇದು ಕೇಂದ್ರ ಸರ್ಕಾರದ ಆಸ್ತಿಯನ್ನಾಗಿ ಪರಿವರ್ತಿಸುವ ಹಿಂಬಾಗಿಲಿನ ಪ್ರಯತ್ನವಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಸಾಂವಿಧಾನಿಕ ಖಾತರಿಯಾಗಿದ್ದು, ಇದರ ಪ್ರಕಾರ ಎಲ್ಲಾ ಭಾರತೀಯ ಮಕ್ಕಳಿಗೆ ಪ್ರಾಥಮಿಕ ಶಾಲೆಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಆರ್‌ಟಿಇ ಪ್ರಮುಖ ಸುರಕ್ಷತಾ ಕ್ರಮಗಳನ್ನು ಒದಗಿಸಲಾಗಿದೆ. ಪ್ರತಿ ನೆರೆಹೊರೆಯಿಂದ ಒಂದು ಕಿಲೋಮೀಟರ್ ಒಳಗೆ ಒಂದು ಕಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರತಿ ನೆರೆಹೊರೆಯಿಂದ ಮೂರು ಕಿಲೋಮೀಟರ್ ಒಳಗೆ ಒಂದು ಹಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಯಾಗಬೇಕು. ಎನ್ಇಪಿ ಪರಿಚಿಯುವ ಮೂಲಕ ಈ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸುವ ಪ್ರಯತ್ನ ಮಾಡುತ್ತಿದೆ.

2014 ರಿಂದ, ದೇಶಾದ್ಯಂತ 89,441 ಸಾರ್ವಜನಿಕ ಶಾಲೆಗಳು ಬಂದ್ ಆಗಿದ್ದು, 42,944 ಹೆಚ್ಚುವರಿ ಖಾಸಗಿ ಶಾಲೆಗಳು ಸ್ಥಾಪನೆಯಾಗಿವೆ. ದೇಶದ ಬಡವರು ಸಾರ್ವಜನಿಕ ಶಿಕ್ಷಣದಿಂದ ಹೊರಗುಳಿದಿದ್ದುಸ ದುಬಾರಿ ಮತ್ತು ಕಡಿಮೆ ನಿಯಂತ್ರಣದ ಖಾಸಗಿ ಶಾಲಾ ವ್ಯವಸ್ಥೆಯ ಕೈಗೆ ಸಿಲುಕಿದ್ದಾರೆ.

ಉನ್ನತ ಶಿಕ್ಷಣದಲ್ಲಿ, ಕೇಂದ್ರ ಸರ್ಕಾರವು ಯುಜಿಸಿಯ ಹಿಂದಿನ ಬ್ಲಾಕ್-ಅನುದಾನ ವ್ಯವಸ್ಥೆಗೆ ಬದಲಿಯಾಗಿ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆಯನ್ನು (ಎಚ್‌ಇಎಫ್‌ಎ) ಪರಿಚಯಿಸಿದೆ. ವಿಶ್ವವಿದ್ಯಾನಿಲಯಗಳು HEFA ಯಿಂದ ಮಾರುಕಟ್ಟೆ ಬಡ್ಡಿದರದಲ್ಲಿ ಸಾಲ ಪಡೆಯಲು ಪ್ರೋತ್ಸಾಹಿಸಲಾಗುತ್ತಿದೆ, ನಂತರ ಅವರು ತಮ್ಮ ಆದಾಯದಿಂದ ಅದನ್ನು ಮರುಪಾವತಿಸಲು ಬಾಧ್ಯರಾಗಿರುತ್ತಾರೆ. ಅನುದಾನಗಳ ಬೇಡಿಕೆಯ ಕುರಿತಾದ ತನ್ನ 364 ನೇ ವರದಿಯಲ್ಲಿ, ಶಿಕ್ಷಣದ ಸಂಸದೀಯ ಸ್ಥಾಯಿ ಸಮಿತಿಯು ಈ ಸಾಲಗಳಲ್ಲಿ ಶೇ.78 ರಿಂದ ಶೇ.100 ರಷ್ಟು ವಿಶ್ವವಿದ್ಯಾಲಯಗಳು ವಿದ್ಯಾರ್ಥಿ ಶುಲ್ಕದ ಮೂಲಕ ಮರುಪಾವತಿಸುತ್ತಿವೆ ಎಂದು ಕಂಡುಹಿಡಿದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾರ್ವಜನಿಕ ಶಿಕ್ಷಣಕ್ಕೆ ಹಣಕಾಸು ಒದಗಿಸುವುದರಿಂದ ಸರ್ಕಾರ ಹಿಂದೆ ಸರಿದ ಕಾರಣ ಶುಲ್ಕ ಹೆಚ್ಚಳವನ್ನು ವಿದ್ಯಾರ್ಥಿಗಳು ಭರಿಸಬೇಕಾಗಿದೆ.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಲ್ಲಿ (NAAC) ಲಂಚ ಹಗರಣದಿಂದ ಹಿಡಿದು ಅಸಮರ್ಥ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವರೆಗೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗಳು ಮತ್ತು ಸಂಸ್ಥೆಗಳು ಶಿಕ್ಷಣಕ್ಕಿಂತಲೂ ಆರ್ಥಿಕ ದುರುಪಯೋಗಕ್ಕಾಗಿ ಹೆಚ್ಚು ಗಮನ ಸೆಳೆಯುತ್ತಿವೆ. ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬೆಳೆಯುತ್ತಿರುವ ಈ ಲಂಚ ಮತ್ತು ಸಿನಿಕತನವು ಸರ್ಕಾರಿ ಪ್ರಾಯೋಜಿತ ರಾಜಕೀಯೀಕರಣ ಮತ್ತು ಶಿಕ್ಷಣದ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ್ದಾಗಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT