ನವದೆಹಲಿ: ಮಹಾಕುಂಭ ಮೇಳದಲ್ಲಿ ರಾತ್ರೋ ರಾತ್ರಿ ಪ್ರಸಿದ್ಧಿಯಾಗಿದ್ದ ಮೊನಾಲಿಸಾ ಭೊನ್ಸಾಲೆ ಅವರಿಗೆ ಸಿನಿಮಾದಲ್ಲಿ ನಟಿಸಲು ಆಫರ್ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಾಗಿ ನಂಬಿಸಿ, ಯುವತಿಯೊಬ್ಬರ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿರುವ ಆರೋಪದಡಿ ಮಿಶ್ರಾ ಅವರನ್ನು ಬಂಧಿಸಲಾಗಿದೆ. ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ನಂತರ ಸನೋಜ್ ಮಿಶ್ರಾ ಅವರನ್ನು ಭಾನುವಾರ ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸನೋಜ್ ಮಿಶ್ರಾ ತನನ್ನು ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ಹೇಳಿ, ನಾಲ್ಕು ವರ್ಷ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಮೂರು ಭಾರಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ 28 ವರ್ಷದ ಯುವತಿಯೊಬ್ಬರು ದೂರು ದಾಖಲಿಸಿದ್ದರು.
ಇದರ ವಿರುದ್ಧ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾದ ಮಹಾಕುಂಭ ಮೇಳದಲ್ಲಿ ತನ್ನ ಕಣ್ಣಿನಿಂದಲೇ ನೆಟ್ಟಿಗರ ಗಮನ ಸೆಳೆದಿದ್ದ ಮೊನಾಲಿಸಾ ಭೊನ್ಸಾಲೆ ಸಿನಿಮಾದಲ್ಲಿ ಅಭಿನಯಿಸಲ ಮಿಶ್ರಾ ಅವಕಾಶ ನೀಡಿದ್ದರು.
ಮೊನಾಲಿಸಾ ಕುಟಂಬವನ್ನು ಭೇಟಿ ಮಾಡಿ ‘ದಿ ಡೈರಿ ಆಫ್ ಮಣಿಪುರ್’ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಸಹಿ ಹಾಕಿಸಿಕೊಂಡಿದ್ದರು. ಶೂಟಿಂಗ್ ಕೂಡ ಶುರುವಾಗಿದೆ ಎಂಬ ಮಾಹಿತಿ ಕೆಲ ದಿನದ ಹಿಂದೆ ಹರಡಿತ್ತು. ಇದೀಗ ಸನೋಜ್ ಮಿಶ್ರಾ ಬಂಧನಕ್ಕೊಳಗಾಗಿದ್ದು, ಜೈಲು ಸೇರಿದ್ದಾರೆ.