ವಿಯಾನಾಳ ಹೆಸರನ್ನು 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸೇರಿಸಿರುವುದು. 
ದೇಶ

ಗುಣವಾಗದ Brain tumor ಸಮಸ್ಯೆ: ಜೈನ ಧರ್ಮದ ಕಠಿಣ 'ಸಲ್ಲೇಖನ ವ್ರತ' ಕೈಗೊಂಡು ಜೀವ ತ್ಯಜಿಸಿದ 3 ವರ್ಷದ ಪುಟ್ಟ ಬಾಲಕಿ!

ವಿಯಾನಾ ಜೈನ್ ಕಳೆದ ಹಲವು ತಿಂಗಳುಗಳಿಂದ ಮೆದುಳಿನ ಗೆಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಳು. ಶಸ್ತ್ರಚಿಕಿತ್ಸೆ ಮಾಡಿಸಿದ ನಂತರವೂ ಸಮಸ್ಯೆ ದೂರಾಗಿರಲಿಲ್ಲ.

ಭೋಪಾಲ್: ಸಾಕಷ್ಟು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಬಳಿಕವೂ ಮಿದುಳಿನ ಗಡ್ಡೆ (Brain tumor) ಸಮಸ್ಯೆ ದೂರಾಗದೆ ಅತೀವ್ರ ಸಮಸ್ಯೆ ಎದುರಿಸುತ್ತಿದ್ದ ಮೂರು ವರ್ಷದ ಪುಟ್ಟ ಮಗುವೊಂದು ಜೈನ ಧರ್ಮದ ಕಠಿಣ ಸಲ್ಲೇಖನ ವ್ರತ ಕೈಗೊಂಡು ಜೀವ ತ್ಯಜಿಸಿದ್ದಾಳೆ. ಈ ಮೂಲಕ ಕಠಿಣ ವ್ರತ ಕೈಗೊಂಡ ವಿಶ್ವದ ಅತ್ಯಂತ ಕಿರಿಯ ಬಾಲಕಿ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ವಿಯಾನಾ ಜೈನ್ (3) ಸಲ್ಲೇಖನ ವ್ರತದ ಮೂಲಕ ಜೀವ ತ್ಯಜಿಸಿದ ಬಾಲಕಿಯಾಗಿದ್ದಾಳೆ. ಮಧ್ಯ ಪ್ರದೇಶದ ಇಂದೋರ್​ನಲ್ಲಿ ಈ ಘಟನೆ ನಡೆದಿದೆ.

ವಿಯಾನಾ ಜೈನ್ ಕಳೆದ ಹಲವು ತಿಂಗಳುಗಳಿಂದ ಮೆದುಳಿನ ಗೆಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಳು. ಶಸ್ತ್ರಚಿಕಿತ್ಸೆ ಮಾಡಿಸಿದ ನಂತರವೂ ಸಮಸ್ಯೆ ದೂರಾಗಿರಲಿಲ್ಲ. ನಂತರ ಜೈನ ಗುರು ರಾಜೇಶ್ ಮುನಿ ಮಹಾರಾಜ್ ಬಳಿಗೆ ಪೋಷಕರಾದ ಪೋಷಕರು ವರ್ಷಾ ಮತ್ತು ಪಿಯೂಷ್ ಜೈನ್ ಹೋಗಿದ್ದಾರೆ. ಈ ವೇಳೆ ಮುನಿಗಳು ಬಾಲಕಿಯ ಅಂತಿಮ ಕಾಲ ಸನ್ನಿಹಿತವಾಗಿದ್ದು, ಸಲ್ಲೇಖನ ವ್ರತಕ್ಕೆ ಮುಂದಾಗುವಂತೆ ಸಲಹೆ ನೀಡಿದ್ದಾರೆ.

ಬಾಲಕಿ ಪುಟ್ಟ ಮಗುವಾಗಿದ್ದರಿಂದ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿಲ್ಲದ ಕಾರಣ ಪೋಷಕರು ವ್ರತದ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ವ್ರತ ಕೈಗೊಂಡ 10 ನಿಮಿಷಗಳಲ್ಲಿ ಬಾಲಿ ಪ್ರಾಣ ತ್ಯಜಿಸಿದ್ದಾಳೆಂದು ತಿಳಿದುಬಂದಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಗುವಿಗೆ ಮೆದುಳಿನ ಗೆಡ್ಡೆ ಇರುವುದು ಪತ್ತೆಯಾಯಿತ್ತು. ಜನವರಿಯಲ್ಲಿ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಸ್ಥಿತಿ ಸುಧಾರಿಸಿತ್ತು. ಆದರೆ ಒಂದೆರಡು ತಿಂಗಳ ನಂತರ ಸಮಸ್ಯೆ ಮರುಕಳುಹಿಸಿತ್ತು. ನಂತರ ಮಗುವಿನ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ಮಾರ್ಚ್ 21 ರಂದು ನಾವು ಅವರನ್ನು ನಮ್ಮ ಜೈನ ಗುರುಗಳ ಬಳಿಗೆ ಕರೆದೊಯ್ದೆವು. ಅವರು ಆಕೆಯ ಅಂತಿಮ ಸಮಯ ಸಮೀಪಿಸುತ್ತಿದೆ ಎಂದು ನಮಗೆ ಹೇಳಿದರು. ಸಂತಾರ ವ್ರತ ಕೈಗೊಳ್ಳುವಂತೆ ಸಲಹೆ ನೀಡಿದ್ದರು ಎಂದು ವರ್ಷಾ ಅವರು ಹೇಳಿದ್ದಾರೆ.

ಗುರುಗಳು ಸಂತಾರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. 107 ವ್ಯಕ್ತಿಗಳಿಗೆ ಸಂತಾರ ವ್ರತ ಕೈಗೊಳ್ಳಲು ಸಹಾಯ ಮಾಡಿದ್ದಾರೆ. ನಾವು ಭಾರವಾದ ಹೃದಯದಿಂದ ಒಪ್ಪಿಕೊಂಡೆವು. ಸಂತಾರ ಆಚರಣೆಯ ಮಂತ್ರಗಳ ಪಠಣದ ನಂತರ 10 ನಿಮಿಷಗಳಲ್ಲಿ ವಿಯಾನಾ ಕೊನೆಯುಸಿರೆಳೆದರು ಎಂದು ತಿಳಿಸಿದರು.

ನಾನು ಆಗಾಗ್ಗೆ ಅನಾಥಾಶ್ರಮಗಳಿಗೆ ಭೇಟಿ ನೀಡುತ್ತಲೇ ಇರುತ್ತೇನೆ. ನನ್ನ ಮಗಳು ಹಸುಗಳು ಮತ್ತು ಪಾರಿವಾಳಗಳಿಗೆ ಆಹಾರವನ್ನು ನೀಡುವುದನ್ನು ಇಷ್ಟಪಡುತ್ತಿದ್ದಳು, ನಾವು ಅದನ್ನು ಮುಂದುವರಿಸುತ್ತಿದ್ದೇವೆ. ಭವಿಷ್ಯದಲ್ಲಿ ಆಕೆಯ ನೆನಪಿಗಾಗಿ ದೊಡ್ಡ ಮರಗಳ ನೆಡುವುದು ನನ್ನ ಕನಸಾಗಿದೆ ಎಂದು ಹೇಳಿದ್ದಾರೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ದಾಖಲು

ಇನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಲ್ಲೇಖನ ವ್ರತದ ಮೂಲಕ ಜೀವ ತ್ಯಾಗ ಮಾಡಿದ ಮೊದಲ ನಿದರ್ಶನ ಇದಾಗಿದ್ದು, ಬಾಲಕಿ ವಿಯಾನಾಳ ಹೆಸರನ್ನು 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸೇರಿಸಲಾಗಿದೆ.

ಈ ಸುದ್ದಿ ತಿಳಿದು ಜೈನ ಸಮಾಜ ಬುಧವಾರ ಇಲ್ಲಿನ ಕಿಮ್ಟಿ ಗಾರ್ಡನ್‌ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಬಾಲಕಿಯ ಪೋಷಕರನ್ನು ಹಾಗೂ ಅವರು ತೆಗೆದುಕೊಂಡ ದಿಟ್ಟ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಿರ್ಧಾರವನ್ನು ಗೌರವಿಸಿದರು.

ಸಲ್ಲೇಖನ ಅಥವಾ ಸಂತಾರ ವ್ರತ ಎಂದರೇನು..?

ಸಲ್ಲೇಖನ ಅಥವಾ ಸಂತಾರಾ ಜೈನ ಸಮುದಾಯದಲ್ಲಿ ಕಂಡುವರುವ, ದ್ದೇಶಪೂರ್ವಕವಾಗಿ ಸಾವನ್ನು ಅಪ್ಪುವುದಕ್ಕೆ ಅಣಿಯಾಗಲು ಇರುವ ವ್ರತ. ನಿರಾಹಾರಿಗಳಾಗಿ ಪರಪಮದವನ್ನು ಸೇರುವುದಕ್ಕೆ ಆ ಸಮುದಾಯ ಶೋಧಿಸಿರುವ ಮಾರ್ಗ ಅದು. ಜೈನ ಮುನಿ ತರುಣ ಸಾಗರರೂ ಸಲ್ಲೇಖನ ವ್ರತ ಕೈಗೊಂಡು ತಮ್ಮ 51 ನೇ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಿದ್ದರು.

ನಿರಾಹಾರಿಗಳಾಗಿ ಕೈಗೊಳ್ಳುವ ಸಲ್ಲೇಖನವನ್ನು ಆತ್ಮಹತ್ಯೆಗೂ ಹೋಲಿಕೆ ಮಾಡಿ ಅನೇಕರು ಆಕ್ಷೇಪಿಸಿದ್ದೂ ಇದೆ. 2006 ರಲ್ಲಿ ಜೈಪುರ ಮೂಲದ ವಕೀಲ ನಿಖಿಲ್ ಸೋನಿ ಎಂಬುವವರು ಸಲ್ಲೇಖನ ಅಥವಾ ಸಂತಾರಾವನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದರು. ಶ್ವೇತಾಂಬರ ಜೈನರು ಆಚರಿಸುವ ಸಂತಾರಾ ದಿಗಂಬರರು ಆಚರಿಸುವ ಸಲ್ಲೇಖನ ವ್ರತ ದೇಶದ ಕಾನೂನಿನ ವ್ಯಾಪ್ತಿಯಲ್ಲಿ ಬರುವ ಆರ್ಟಿಕಲ್ 21 ರ ಪ್ರಕಾರ ಜೀವಿಸುವ ಹಕ್ಕನ್ನು ಉಲ್ಲಂಘನೆ ಮಾಡುವ ವ್ರತವಾಗಿದೆ, ಆದ್ದರಿಂದ ಅದನ್ನು ಆತ್ಮಹತ್ಯೆಗೆ ಸಮಾನವಾದದ್ದು ಎಂದು ಪರಿಗಣಿಸಿ ಸಲ್ಲೇಖನವನ್ನು ಅಪರಾಧವೆಂದು ಪರಿಗಣಿಸಬೇಕೆಂದು ವಾದ ಮಾಡಿದ್ದರು.

ಆದರೆ ಪರಂಪರೆಯಿಂದ ಬಂದಿರುವ ಆಚರಣೆಯನ್ನು ಸಮರ್ಥಿಸಿಕೊಂಡಿದ್ದ ಜೈನ ಸಮುದಾಯ ಕೋರ್ಟ್ ನಲ್ಲಿ ಸಮರ್ಥವಾದ ಮುಂದಿಟ್ಟಿತ್ತು. ಸಲ್ಲೇಖನ ವ್ರತ ಸ್ವಯಂ ಶುದ್ಧೀಕರಣಕ್ಕಾಗಿ ಇರುವ ಧಾರ್ಮಿಕ ಆಚರಣೆ. ಸುಖಾ ಸುಮ್ಮನೆ ಮನಸ್ಸಿಗೆ ಅನ್ನಿಸಿದ ತಕ್ಷಣಕ್ಕೆ ಸಲ್ಲೇಖನ ವ್ರತವನ್ನು ಯಾರೂ ಕೈಗೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಅವಕಾಶವೂ ಇಲ್ಲ. ಯಾರು ಜೀವನದಲ್ಲಿ ತನ್ನ ಜೀವಿತದ ಎಲ್ಲಾ ಉದ್ದೇಶಗಳನ್ನು ಈಡೇರಿಸಿರುವ ತೃಪ್ತಿ ಹೊಂದಿರುತ್ತಾರೋ, ಇನ್ನು ಈ ದೇಹದ ಮೂಲಕ ಯಾವುದೇ ಉದ್ದೇಶಗಳೂ ಈಡೇರುವ ಅಗತ್ಯವಿಲ್ಲ ಎಂದು ಅನಿಸುತ್ತದೋ ಅಂಥವರು ಮಾತ್ರ ಸಂತಾರಾ ಅಥವಾ ಸಲ್ಲೇಖನ ವ್ರತವನ್ನು ಕೈಗೊಳ್ಳಬಹುದು, ಆದ್ದರಿಂದ ಸಲ್ಲೇಖನವನ್ನು ಆತ್ಮಹತ್ಯೆ ಅಂತಲಾಗಲೀ ಸ್ವಯಂ ಸಾವನ್ನು ಬಯಸುವುದು ಅಂದಾಗಲೀ ಹೇಳಲು ಸಾಧ್ಯವಿಲ್ಲ. ಆದರೆ, ಜೀವಿತದ ಉದ್ದೇಶವನ್ನು ಈಡೇರಿಸಿರುವವರು ಸಾವನ್ನು ಎದುರುಗೊಳ್ಳುವ ವಿಧಾನ ಎಂದು ವಾದಿಸಿತ್ತು. ನಂತರ ಕೋರ್ಟ್ ಸಹ ಸಲ್ಲೇಖನವನ್ನು ಜೈನ ಧರ್ಮದಲ್ಲಿ ಪಾಲಿಸಲೇಬೇಕಾದ ಕಡ್ಡಾಯ ವ್ರತ ಎಂದು ಹೇಳಲು ಸಾಧ್ಯವಿಲ್ಲ ಎಂದಿತ್ತು. ಈ ಬಳಿಕ ಜೈನ ಸಮುದಾಯ ಕೋರ್ಟ್ ನ ತೀರ್ಪಿನ ಬಗ್ಗೆಯೂ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿತ್ತು.

ಜೈನ ಸಮುದಾಯ ಕೋರ್ಟ್ ನಲ್ಲಿ ಹೇಳಿದ್ದಂತೆ, ಸಲ್ಲೇಖನ ಅಥವಾ ಸಂತಾರಾ ಯಾರು ಬೇಕಾದರೂ ಕೈಗೊಳ್ಳಬಹುದಾದ ವ್ರತವಲ್ಲ. ಅನಾರೋಗ್ಯದಿಂದ ಬಳಲುತ್ತಿರುವವರು ಅಥವಾ ಸಾವಿನ ಸನಿಹದಲ್ಲಿರುವವರು ಜೀವಿತದ ಉದ್ದೇಶವನ್ನು ಈಡೇರಿಸಿರುವವರು ಕೈಗೊಳ್ಳಬಹುದಾಗಿರುವುದಾಗಿದ್ದು ಅಪರೂಪದಲ್ಲಿ ಕೆಲವೇ ಮಂದಿ ಸಾಧು ಸಂತರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ. ಹಾಗಂತ ಅವರೇನು ದಿಢೀರನೆ ಎಲ್ಲಾ ರೀತಿಯ ಆಹಾರಗಳನ್ನು ಬಿಟ್ಟು ಉಪವಾಸ ಕುಳಿತುಬಿಡುವುದಿಲ್ಲ. ಅದಕ್ಕೂ ಒಂದು ಕ್ರಮವಿದೆ. ಪ್ರಾರಂಭದಲ್ಲಿ ಘನ ಆಹಾರವನ್ನು ತ್ಯಜಿಸುತ್ತಾರೆ, ನಂತರ ದ್ರವರೂಪದಲ್ಲಿರುವ ಆಹಾರ, ಕೊನೆಗೆ ನೀರನ್ನೂ ತ್ಯಜಿಸಿ ದೇಹವನ್ನು ಅಂತ್ಯಗೊಳಿಸಿಬಿಡುತ್ತಾರೆ.

ಜೈನ ಸಮುದಾಯದ ಆದಿಯಿಂದಲೂ ಸಲ್ಲೇಖನ ವ್ರತ ಇದೆ. ಜೈನರು ಸಲ್ಲೇಖನ ಕೈಗೊಳ್ಳುವುದಕ್ಕೆ ಮತ್ತೊಂದು ಪ್ರಧಾನ ಕಾರಣವೆಂದರೆ ಅದು ಕರ್ಮ. ಆಹಾರ ಸೇವನೆಯೂ ಸೇರಿ ಜೈನರ ನಂಬಿಕೆಯ ಪ್ರಕಾರ ಪ್ರತಿಯೊಂದೂ ಕ್ರಿಯೆಯೂ ಕರ್ಮಕ್ಕೆ ಸಂಬಂಧಿಸಿದ್ದಾಗಿದೆ. ಸಸ್ಯಗಳಿಗೂ ಜೀವವಿದೆ ಎಂದು ನಂಬಿರುವ ಜೈನರು ತರಕಾರಿ, ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ನೋವಾಗುತ್ತದೆ ಎಂದು ಭಾವಿಸತ್ತಾರೆ. ಹೀಗಾಗಿ ಅವುಗಳ ಸೇವನೆಯೂ ವರ್ಜ್ಯವೆನ್ನಿಸಿದೆ. ಸಸ್ಯಾಹಾರ ಸೇವನೆಯಿಂದ ಸಸ್ಯಗಳಿಗೆ ನೋವನ್ನು ಉಂಟು ಮಾಡಿದಂತೆ. ನೀರಿನಲ್ಲಿಯೂ ಸೂಕ್ಷ್ಮ ಜೀವಿಗಳಿರುವುದರಿಂದ ನೀರು ಕುಡಿಯುವುದು ಕೂಡ ನಕಾರಾತ್ಮಕ ಕರ್ಮಕ್ಕೆ ಕಾರಣ ಎಂಬುದು ಸಲ್ಲೇಖನ ಕೈಗೊಂಡವರ ನಂಬಿಕೆಯಾಗಿರುತ್ತದೆ. ದೇಹ ತ್ಯಾಗದ ವೇಳೆ ಹಳೆಯ ಕರ್ಮದ ಪಾಪದಿಂದ ದೇಹವನ್ನು ಶುದ್ಧೀಕರಿಸಿ ಮೋಕ್ಷ ಸಾಧಿಸಲು ಜೈನರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT