ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್ ನ ಉಗ್ರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಹಲವು ದೇಶಗಳು ಆಪರೇಷನ್ ಸಿಂಧೂರ ಹೆಸರಿನ ಅರ್ಥ ಹುಡುಕುತ್ತಿದ್ದು, ಸೌದಿ ಅರೇಬಿಯಾ ಸುದ್ದಿ ವಾಹಿನಿಯೊಂದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ನೀಡಿರುವ ಸಂದರ್ಶನ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳು ಚೆಲ್ಲಿದ ರಕ್ತದ ಬಣ್ಣಕ್ಕಿಂತ ಸಿಂಧೂರ ಬಣ್ಣ ಹೆಚ್ಚು ಭಿನ್ನವಾಗಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸೌದಿ ಅರೇಬಿಯಾದ ಸುದ್ದಿ ವಾಹಿನಿಗೆ ವಿವರಿಸಿದ್ದಾರೆ. ಭಾರತದ ಪ್ರತಿದಾಳಿಯ ಹೆಸರು ಆಪರೇಷನ್ ಸಿಂಧೂರ್ ಏಕೆ ಜನರ ಭಾವನೆಗಳನ್ನು ಮುಟ್ಟಿದೆ ಎಂಬುದನ್ನು ಶಶಿ ತರೂರ್ ವಿವರಿಸಿದ್ದಾರೆ.
ಆಪರೇಷನ್ ಸಿಂಧೂರ್ ಎಂಬ ಹೆಸರು ಏಕೆ ಮಹತ್ವದ್ದಾಗಿದೆ ಎಂದು ಕೇಳಿದಾಗ, ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, ಸಿಂಧೂರ್ ಎಂದರೆ ವಿವಾಹಿತ ಮಹಿಳೆಯರು ತಮ್ಮ ಕೂದಲನ್ನು ವಿಭಜಿಸುವಾಗ ಹಾಕಿಕೊಳ್ಳುವ ಚಿಹ್ನೆ ಎಂದು ಹೇಳಿದ್ದಾರೆ. "ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೇಶದ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಚಿತ್ರಣವೆಂದರೆ, ಹೊಸದಾಗಿ ವಿವಾಹಿತಳಾದ- ಈಗ ವಿಧವೆಯಾದ - ವಧು ಮಧುಚಂದ್ರದಲ್ಲಿ ತನ್ನ ಹತ್ಯೆಗೀಡಾದ ಪತಿಯ ದೇಹದ ಮುಂದೆ ಮಂಡಿಯೂರಿ ದುಃಖಿತಳಾಗಿ ಕುಳಿತಿರುವುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಯೋತ್ಪಾದಕ ದಾಳಿಯು ವಿವಾಹಿತ ಮಹಿಳೆಯರು ಮಾತ್ರ ಧರಿಸುವಂತೆ ಹಣೆಯ ಸಿಂಧೂರವನ್ನು ಕಸಿದಿದೆ" ಎಂದು ತರೂರ್ ಸೌದಿ ಚಾನಲ್ ಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರ ಹೃದಯವಿದ್ರಾವಕ ಚಿತ್ರವನ್ನು ಶಶಿ ತರೂರ್ ಉಲ್ಲೇಖಿಸಿದ್ದಾರೆ.
"ಈ (ಆಪರೇಷನ್ ಸಿಂಧೂರ್) ಎಂಬುದು ಜನರಿಗೆ ಏನಾಯಿತು ಮತ್ತು ಈ ಕ್ರಮ ಏಕೆ ಅಗತ್ಯವಾಗಿತ್ತು ಎಂಬುದನ್ನು ನೆನಪಿಸಲು ಬಹಳ ಭಾವನಾತ್ಮಕ, ಪದವಾಗಿದೆ. ಈ ಯುವತಿ ಮತ್ತು ಅದೇ ದಾಳಿಯ ಪ್ರಕ್ರಿಯೆಯಲ್ಲಿ ವಿಧವೆಯಾದ ಕೆಲವು ಇತರ ಮಹಿಳೆಯರು ಸೇರಿದಂತೆ ಮುಗ್ಧ ನಾಗರಿಕರು ಉಗ್ರವಾದದ ಸಂತ್ರಸ್ತರಾಗಿದ್ದಾರೆ" ಎಂದು ತರೂರ್ ಹೇಳಿದ್ದಾರೆ "ಸಿಂಧೂರ ಬಣ್ಣವು ರಕ್ತದ ಬಣ್ಣಕ್ಕಿಂತ ಹೆಚ್ಚು ಭಿನ್ನವಾಗಿಲ್ಲ ಮತ್ತು ನಮ್ಮ ದೇಶದಲ್ಲಿ ಭಯೋತ್ಪಾದಕರು ಚೆಲ್ಲಿದ್ದು ಅದೇ ಎಂಬ ಭಾವನೆಯೂ ನಿಸ್ಸಂದೇಹವಾಗಿ ಇದೆ ಎಂದು ಶಶಿ ತರೂರ್ ಹೇಳಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಾರ್ಯಾಚರಣೆಗೆ ಆ ರೀತಿ ಹೆಸರು ನೀಡಿರುವುದು ಬಹಳ ಭಾವನಾತ್ಮಕ ಮತ್ತು ಶಕ್ತಿಯುತ ಆಯ್ಕೆಯಾಗಿದೆ ಎಂದು ನಾನು ಭಾವಿಸಿದ್ದೇನೆ" ಎಂದು ತರೂರ್ ಸೌದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಹಿಂದೆ, ಕಾರ್ಯಾಚರಣೆಯ ಹೆಸರು "ಅದ್ಭುತ" "ಯಾರು ಯೋಚಿಸಿದ್ದಾರೋ ಅವರಿಗೆ ಶಭಾಶ್, ಎಂದು ತರೂರ್ ಹೇಳಿದ್ದರು.
ಕಾಂಗ್ರೆಸ್ ಸಂಸದರು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ನೀಡಿದ ಸಂದರ್ಶನಗಳಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸುತ್ತಿದ್ದಾರೆ. ಪಾಕಿಸ್ತಾನ "ನಿರಾಕರಣೆಯ ನಿಪುಣ" ಎಂದು ಅವರು ಹೇಳಿದ್ದರು. "26/11/2008 ರಂದು 170 ಜನರನ್ನು ಬಲಿತೆಗೆದುಕೊಂಡ ಮುಂಬೈ ದಾಳಿಯಲ್ಲಿ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ನಿರಾಕರಿಸಿದರು, ಒಬ್ಬ ಭಯೋತ್ಪಾದಕ ಜೀವಂತವಾಗಿ ಸೆರೆಹಿಡಿಯಲ್ಪಟ್ಟನು ಮತ್ತು ಪಾಕಿಸ್ತಾನಿಗಳು ಅವನು ಮತ್ತು ಅವನು ಹೇಳಿದ ಎಲ್ಲವೂ ತಮ್ಮಿಂದ ಬಂದವು ಎಂದು ಒಪ್ಪಿಕೊಳ್ಳಬೇಕಾಯಿತು. ಪಾಕಿಸ್ತಾನಿ ಸೇನಾ ನೆಲೆಯಿಂದ ದೂರದಲ್ಲಿರುವ ಮಿಲಿಟರಿ ಶಿಬಿರದಲ್ಲಿ ಒಸಾಮಾ ಬಿನ್ ಲಾಡೆನ್ ಪತ್ತೆಯಾಗುವವರೆಗೂ ಅವರು ಎಲ್ಲಿದ್ದಾನೆಂದು ತಿಳಿದಿಲ್ಲ ಎಂದು ನಿರಾಕರಿಸಿದರು. ಇದು ಪಾಕಿಸ್ತಾನದ ಮಾರ್ಗ ಎಂದು ಶಶಿ ತರೂರ್ ಪಾಕ್ ನ್ನು ಟೀಕಿಸಿದ್ದರು.