ವಿದೇಶಾಂಗ ಸಚಿವ ಎಸ್ ಜೈಶಂಕರ್ 
ದೇಶ

'ಭಾರತ-ಪಾಕ್ ಸಂಘರ್ಷ ಉಲ್ಬಣಗೊಂಡರೆ ಯಾರೂ ಗೆಲ್ಲುವುದಿಲ್ಲ'; ಬ್ರಿಟನ್ ಸಲಹೆಗೆ S Jaishankar ಖಡಕ್ ಪ್ರತಿಕ್ರಿಯೆ

ಶುಕ್ರವಾರ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರನ್ನು ಭೇಟಿ ಮಾಡಿದ್ದ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಾಕಷ್ಟು ವಿಚಾರಗಳ ಕುರಿತು ಚರ್ಚೆ ನಡೆಸಿದರು.

ನವದೆಹಲಿ: ಭಾರತದ ಏಕತೆ-ಸೌಹಾರ್ಧತೆ ಮತ್ತು ಆಂತರಿಕ ರಕ್ಷಣೆಯ ವಿಚಾರಕ್ಕೆ ಬಂದರೆ ಪರಮಾಪ್ತ ರಾಷ್ಟ್ರವಾದರೂ ಮಾತು ಕೇಳಲ್ಲ ಎಂಬ ಖಡಕ್ ಸಂದೇಶವನ್ನು ಇದೀಗ ಭಾರತ ಜಾಗತಿಕ ನಾಯಕರಿಗೆ ರವಾನೆ ಮಾಡಿದೆ.

ಪಹಲ್ಗಾಮ್ ಉಗ್ರದಾಳಿ ಮತ್ತು ಅದಕ್ಕೆ ಉತ್ತರವಾಗಿ ಭಾರತದ ನಡೆಸಿದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಬಣಗೊಂಡಿರುವ ಸಂಘರ್ಷದ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ್ದ ಜಾಗತಿಕ ನಾಯಕರಿಗೆ ಭಾರತ ಖಡಕ್ ಸಂದೇಶ ರವಾನಿಸಿದ್ದು, ಭಾರತದ ಏಕತೆ-ಸೌಹಾರ್ಧತೆ ಮತ್ತು ಆಂತರಿಕ ರಕ್ಷಣೆಯ ವಿಚಾರಕ್ಕೆ ಬಂದರೆ ಯಾರ ಮಾತೂ ಕೇಳುವುದಿಲ್ಲ ಎಂದು ದಿಟ್ಟ ಉತ್ತರ ನೀಡಿದೆ.

ಶುಕ್ರವಾರ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರನ್ನು ಭೇಟಿ ಮಾಡಿದ್ದ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಾಕಷ್ಟು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಗೊಂಡರೆ ಯಾರೂ ಗೆಲ್ಲುವುದಿಲ್ಲ ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಸಲಹೆ ನೀಡಿದ್ದು, ಇದಕ್ಕೆ ಉತ್ತರಿಸಿದ ಜೈಶಂಕರ್, 'ಭಯೋತ್ಪಾದನೆಗೆ ಜಗತ್ತು ಶೂನ್ಯ ಸಹಿಷ್ಣುತೆಯನ್ನು ಹೊಂದಿರಬೇಕು' ಎಂದು ಹೇಳಿದ್ದಾರೆ.

ಜೈಶಂಕರ್ ರಷ್ಯಾ ಮತ್ತು ಯುರೋಪಿಯನ್ ಒಕ್ಕೂಟಕ್ಕೂ ಇದೇ ಸಂದೇಶವನ್ನು ರವಾನಿಸಿದ್ದು, “ಯುಕೆ ವಿದೇಶಾಂಗ ಕಾರ್ಯದರ್ಶಿ @DavidLammy ಅವರೊಂದಿಗೆ ಫೋನ್ ಕರೆ ಮಾಡಿದ್ದೆ. ನಮ್ಮ ಚರ್ಚೆಗಳು ಭಯೋತ್ಪಾದನೆಯನ್ನು ಎದುರಿಸುವ ಸುತ್ತ ಕೇಂದ್ರೀಕೃತವಾಗಿದ್ದವು, ಇದಕ್ಕಾಗಿ ಶೂನ್ಯ ಸಹಿಷ್ಣುತೆ ಇರಬೇಕು” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಗಂಭೀರ ಕಳವಳವಾಗಿಯೇ ಉಳಿದಿದೆ” ಎಂದು ದೆಹಲಿಯಲ್ಲಿ ಜೈಶಂಕರ್ ಮತ್ತು ಇಸ್ಲಾಮಾಬಾದ್‌ನಲ್ಲಿ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ಮಾತನಾಡಿದ ನಂತರ ಲ್ಯಾಮಿ ಎಕ್ಸ್‌ನಲ್ಲಿ ಬರೆದಿದ್ದಾರೆ.

“ನಾನು ಸಂಘರ್ಷವಲ್ಲ, ರಾಜತಾಂತ್ರಿಕತೆಯ ಮೂಲಕ ಮುಂದಿನ ಹಾದಿಯನ್ನು ಮುಂದುವರಿಸಿದ್ದೇನೆ. ಇದು ಮತ್ತಷ್ಟು ಉಲ್ಬಣಗೊಂಡರೆ ಯಾರೂ ಗೆಲ್ಲುವುದಿಲ್ಲ ಎಂದು ನನಗೆ ಎಲ್ಲಾ ಕಡೆಯವರಿಗೆ ಸ್ಪಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

1945 ರಲ್ಲಿ ಫ್ಯಾಸಿಸಂ ವಿರುದ್ಧದ ಯುದ್ಧದಲ್ಲಿ ವಿಜಯದ 80ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದೇಶಾಂಗ ಸಚಿವರು ದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿಗೆ ಕಾರಿನಲ್ಲಿ ಹೋದರು.

"ಭಾರತವು ಅಂತರರಾಷ್ಟ್ರೀಯ ಸಮುದಾಯಕ್ಕೆ ಸಾಮಾನ್ಯ ಬೆದರಿಕೆಯಾಗಿರುವ ಭಯೋತ್ಪಾದನೆಯ ಸವಾಲನ್ನು ಎದುರಿಸುತ್ತಿದೆ. ನಮ್ಮೊಂದಿಗೆ ಒಗ್ಗಟ್ಟು ಪ್ರದರ್ಶಿಸಿದವರಿಗೆ ಮತ್ತು ನಡೆಯುತ್ತಿರುವ ದೃಢವಾದ ಪ್ರತಿಕ್ರಿಯೆಯನ್ನು ಅರ್ಥಮಾಡಿಕೊಂಡವರಿಗೆ ನಾನು ಧನ್ಯವಾದ ಹೇಳುತ್ತೇನೆ" ಎಂದು ಅವರು ಹೇಳಿದರು.

ನವದೆಹಲಿಯಲ್ಲಿ ನಡೆದ ಯುರೋಪ್ ದಿನಾಚರಣೆಯಲ್ಲಿಯೂ ಅವರು ಭಾಗವಹಿಸಿದರು.

"ಭಾರತವು ಭಯೋತ್ಪಾದನೆಯ ಸವಾಲನ್ನು ದೃಢವಾಗಿ ಎದುರಿಸುತ್ತಿರುವ ಸಮಯದಲ್ಲಿ ನಾವು ಇಂದು ಒಟ್ಟುಗೂಡಿದ್ದೇವೆ. ಇದು ಸಾಮಾನ್ಯ ಬೆದರಿಕೆಯಾಗಿದ್ದು, ಇದಕ್ಕೆ ಶೂನ್ಯ ಸಹಿಷ್ಣುತೆ ಇರಬೇಕು ಎಂದು ನಾವು ನಂಬುತ್ತೇವೆ. ನಮ್ಮೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಮತ್ತು ದೃಢವಾದ ಪ್ರತಿಕ್ರಿಯೆಯ ಅಗತ್ಯವನ್ನು ಗುರುತಿಸುತ್ತೇನೆ" ಎಂದು ಅವರು ಹೇಳಿದರು.

G7 ದೇಶಗಳ ವಿದೇಶಾಂಗ ಮಂತ್ರಿಗಳ ಸಭೆ, ಭಾರತ-ಪಾಕ್ ಸಂಘರ್ಷ ಕುರಿತು ಆತಂಕ

ಇನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ಭುಗಿಲೆದ್ದಿರುವ ಸೇನಾ ಸಂಘರ್ಷ ವಿಚಾರವಾಗಿ ಇತ್ತೀಚೆಗೆ G7 ದೇಶಗಳ ವಿದೇಶಾಂಗ ಮಂತ್ರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ G7 ವಿದೇಶಾಂಗ ಮಂತ್ರಿಗಳು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದ ಈ ನಾಯಕರು, 'ನಾವು G7 ವಿದೇಶಾಂಗ ಮಂತ್ರಿಗಳು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿ, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆಯಿಂದ ಗರಿಷ್ಠ ಸಂಯಮವನ್ನು ಕೋರುತ್ತೇವೆ.

ಮತ್ತಷ್ಟು ಮಿಲಿಟರಿ ಉಲ್ಬಣವು ಪ್ರಾದೇಶಿಕ ಸ್ಥಿರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಎರಡೂ ಕಡೆಯ ನಾಗರಿಕರ ಸುರಕ್ಷತೆಯ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನಾವು ಕರೆ ನೀಡುತ್ತೇವೆ ಎಂದಿದ್ದರು.

ಅಲ್ಲದೆ ಶಾಂತಿಯುತ ಫಲಿತಾಂಶಕ್ಕಾಗಿ ಎರಡೂ ದೇಶಗಳು ನೇರ ಸಂವಾದದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತೇವೆ. ನಾವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಮುಂದುವರಿಸುತ್ತೇವೆ ಮತ್ತು ತ್ವರಿತ ಮತ್ತು ಶಾಶ್ವತ ರಾಜತಾಂತ್ರಿಕ ನಿರ್ಣಯಕ್ಕಾಗಿ ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಎಂದು ಜಂಟಿ ಹೇಳಿಕೆ ನೀಡಿತ್ತು.

ಇದೀಗ ಇದೇ ಬೆಳವಣಿಗೆ ವಿರುದ್ಧ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕಿಡಿಕಾರಿದ್ದು, ಉಭಯ ದೇಶಗಳ ನಡುವೆ ಸಂಯಮ ಕೋರುವ ಪಾಶ್ಚಿಮಾತ್ಯ ದೇಶಗಳು ಪಾಕಿಸ್ತಾನಕ್ಕೆ ಐಎಂಎಫ್ ಆರ್ಥಿಕ ನೆರವು ನೀಡದಂತೆ ಏಕೆ ತಡೆಯಲಿಲ್ಲ ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಣವನ್ನು ಪಾಕಿಸ್ತಾನ ಖಂಡಿತಾ ಭಾರತದ ವಿರುದ್ಧವೇ ಬಳಸುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT