ನವದೆಹಲಿ: ಮೂರು ದಿನಗಳಿಂದ ನಡೆದ ಭಾರತ- ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನದ ಶೆಲ್, ಡ್ರೋನ್ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದು ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಭಾನುವಾರ ದೃಢಪಡಿಸಿದರು.
DGMO ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7 ರಂದು ಪಾಕಿಸ್ತಾನಿ ಸೇನೆ ನಡೆಸಿದ ಶೆಲ್ ದಾಳಿಯಿಂದ ನಮ್ಮ ನೆಲದಲ್ಲಿ ಯಾವುದೇ ಹಾನಿಯಾಗದಂತೆ ಭಾರತದ ವಾಯು ರಕ್ಷಣಾ ವ್ಯವಸ್ಥೆ ಸನ್ನದ್ಧವಾಗಿತ್ತು. ಮೇ 8 ಮತ್ತು 9 ರಂದು ರಾತ್ರಿ 10-30 ಗಂಟೆಗೂ ಮುನ್ನಾ ಭಾರತದ ಹಲವಾರು ನಗರಗಳಲ್ಲಿ ಡ್ರೋನ್‌ಗಳು, ಮಾನವ ರಹಿತ ವೈಮಾನಿಕ ವಿಮಾನಗಳು (UAVS) ಮತ್ತು ಮಾನವರಹಿತ ಯುದ್ಧ ವೈಮಾನಿಕ ವಾಹನ (UCAVS) ಮೂಲಕ ದಾಳಿಗೆ ಯತ್ನಿಸಲಾಗಿತ್ತು. ಮೇ 7 ರಂದು UAVಗಳನ್ನು ನಿಯೋಜಿಸಿದ್ದ ಪಾಕಿಸ್ತಾನ ಮರುದಿನ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ನಾಗರಿಕರಿಗೆ ಕಿರುಕುಳ ನೀಡಲು ಹೆಚ್ಚಿನ ಹೆಲಿಕಾಪ್ಟರ್ ಗಳನ್ನು ಕಳುಹಿಸಿತ್ತು ಎಂದು ತಿಳಿಸಿದರು.
700 ಡ್ರೋನ್ ಗಳ ಧ್ವಂಸ: ವಾಯುನೆಲೆ, ನಾಗರಿಕರನ್ನು ಗುರಿಯಾಗಿಸಿ ನಿರಂತರ ದಾಳಿಯ ನಂತರ ಪಾಕ್ ನ್ನು ಭಾರತ ಹಿಮ್ಮೆಟ್ಟಿಸಿತು. ಮೇ 8 ರ ಸಂಜೆ ಪಾಕಿಸ್ತಾನ ಭಾರತೀಯ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಯುದ್ಧ ವಿಮಾನಗಳು ಮತ್ತು ಅನೇಕ ಡ್ರೋನ್ ದಾಳಿ ನಡೆಸಿತು. ಆದರೆ ಪೆಚೋರಾ, ಗರುಡಾ ಸ್ನೈಪರ್ಸ್ ಮತ್ತುIAF ಸಮರ್‌ನಂತಹ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳಿಂದ 700 ಡ್ರೋನ್ ಗಳನ್ನು ಹೊಡೆದುರುಳಿಸಲಾಯಿತುಎಂದು ತಿಳಿಸಿದರು.
ಶತ್ರು ರಾಷ್ಟ್ರದ ರಕ್ಷಣಾ ವ್ಯವಸ್ಥೆ ಗುರಿಯಾಗಿಸುವ ಸಾಮರ್ಥ್ಯ: DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಶತ್ರುರಾಷ್ಟ್ರದ ಯಾವುದೇ ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಆದರೆ ಸಂಯಮದಿಂದ ಕಾರ್ಯನಿರ್ವಹಿಸುತ್ತದೆ ಎಂದು ಪುನರುಚ್ಚರಿಸಿದರು.
ಕೆಲವು ಪಾಕ್ ವಿಮಾನಗಳ ಧ್ವಂಸ: ಶತ್ರು ವಿಮಾನಗಳು ಭಾರತೀಯ ವಾಯು ಪ್ರದೇಶಕ್ಕೆ ಬಾರದಂತೆ ಹೊಡೆದುರುಳಿಸಲಾಗಿದೆ. ಆದರೆ, ಎಷ್ಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬುದರ ಬಗ್ಗೆ ನಿಖರವಾದ ಸಂಖ್ಯೆ ಗೊತ್ತಿಲ್ಲ.ಈ ಸಂಬಂಧ ತಾಂತ್ರಿಕ ವಿವರಗಳನ್ನು ಪಡೆಯುತ್ತಿದ್ದೇವೆ ಎಂದು ಏರ್ ಮಾರ್ಷಲ್ ತಿಳಿಸಿದರು.
ಭಾರತದ ಎಲ್ಲಾ ಪೈಲಟ್ ಗಳು ಸುರಕ್ಷಿತ: ಆಪರೇಷನ್ ಸಿಂಧೂರದಲ್ಲಿ ತೊಡಗಿದ್ದ ಭಾರತದ ಎಲ್ಲಾ ಪೈಲಟ್ ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ರಾಜೀವ್ ಘಾಯ್ ತಿಳಿಸಿದರು. ಕಾರ್ಯಾಚರಣೆ ವೇಳೆ ಭಾರತಕ್ಕೆ ಆದ ನಷ್ಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯುದ್ಧದ ಸನ್ನಿವೇಶದಲ್ಲಿ ನಷ್ಟ ಅನಿವಾರ್ಯ ಎಂಬುದನ್ನು ಒಪ್ಪಿಕೊಂಡರು. ಯುದ್ಧದ ಸಂದರ್ಭದಲ್ಲಿ ನಷ್ಟಗಳು ಯುದ್ಧದ ಒಂದು ಭಾಗವಾಗಿರುತ್ತದೆ. ಇನ್ನೂ ಕಾರ್ಯಾಚರಣೆಯ ಸನ್ನಿವೇಶದಲ್ಲಿರುವುದರಿಂದ ಎಷ್ಟು ನಷ್ಟವಾಗಿದೆ ಎಂಬುದನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ.ನಮ್ಮ ಶತ್ರುಗಳಿಗೆ ಮಾಹಿತಿ ನೀಡಲು ಬಯಸುವುದಿಲ್ಲ ಎಂದರು.
ಭಾರತದ ಐವರು ಯೋಧರು ಹುತಾತ್ಮ: ಪಾಕ್ ಸೇನೆ ಜೊತೆಗಿನ ಸಂಘರ್ಘದಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಐವರು ಯೋಧರು ಹುತಾತ್ಮರಾಗಿದ್ದು, ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ ಎಂದು ರಾಜೀವ್ ಘಾಯ್ ತಿಳಿಸಿದರು.