ನವದೆಹಲಿ: ಮಹಿಳೆಯೊಬ್ಬರು ರಫೇಲ್ ಯುದ್ಧ ವಿಮಾನ ಹಾರಾಟ ನಡೆಸಬಹುದಾದರೆ, ಭಾರತೀಯ ಸೇನೆಯು ನ್ಯಾಯಾಧೀಶ ಅಡ್ವೊಕೇಟ್ ಜನರಲ್ ಹುದ್ದೆಗೆ(JAG) ಮಹಿಳೆಯರನ್ನು ಏಕೆ ನೇಮಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.
ವಾಯುಸೇನೆಯಲ್ಲಿ ಮಹಿಳೆಯೊಬ್ಬರು ರಫೇಲ್ ವಿಮಾನ ಹಾರಾಟ ನಡೆಸಲು ಅನುಮತಿಯಿದ್ದರೆ, ಸೇನೆಗೆ ಮಹಿಳೆಯನ್ನು ನ್ಯಾಯಾಧೀಶ ಅಡ್ವೊಕೇಟ್ ಜನರಲ್ (JAG) ಹುದ್ದೆಯಲ್ಲಿ ನೇಮಿಸಲು ಏಕೆ ಕಷ್ಟ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತ ನೇತೃತ್ವದ ದ್ವಿಸದಸ್ಯ ಪೀಠ ಕೇಳಿದೆ.
ಸೇನಾಪಡೆ ಹುದ್ದೆಗಳಲ್ಲಿ ಲಿಂಗ ತಾರತಮ್ಯವಿಲ್ಲ ಎಂದು ಹೇಳಿಕೊಂಡರೂ ಮಹಿಳೆಯರಿಗೆ ಕಡಿಮೆ ಹುದ್ದೆಗಳನ್ನು ಮೀಸಲಿಟ್ಟಿರುವ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಹುದ್ದೆಗಳಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಅಸಮಾನತೆ ತರುವುದನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್,ಭಾರತೀಯ ಸೇನೆಯ ಜೆಎಜಿ ಪ್ರವೇಶ ಯೋಜನೆಯ ಹುದ್ದೆಗೆ ನೇಮಕಾತಿ ಕೋರಿ ಇಬ್ಬರು ಮಹಿಳೆಯರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಅರ್ಜಿದಾರರಾದ ಅರ್ಷ್ನೂರ್ ಕೌರ್ ಮತ್ತು ಇನ್ನೊಬ್ಬ ಮಹಿಳೆ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದಿದ್ದರೂ, ಪುರುಷ ಅಭ್ಯರ್ಥಿಗಳಿಗಿಂತ ಅರ್ಹತೆಯಲ್ಲಿ ಹೆಚ್ಚಿನವರಾಗಿದ್ದರೂ, ಮಹಿಳೆಯರಿಗೆ ಕಡಿಮೆ ಹುದ್ದೆಗಳಿರುವುದರಿಂದ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಮೊದಲ ಅರ್ಜಿದಾರರಾಗಿ ಅಷ್ನೂರ್ ಕೌರ್ ಅವರಿಗೆ ನ್ಯಾಯಾಲಯವು ಮಧ್ಯಂತರ ಪರಿಹಾರವನ್ನು ನೀಡಿ ಜೆಎಜಿ ಅಧಿಕಾರಿಯಾಗಿ ನೇಮಕಾತಿಗೆ ಮುಂದಿನ ಲಭ್ಯವಿರುವ ತರಬೇತಿ ಕೋರ್ಸ್‌ನಲ್ಲಿ ಅವರನ್ನು ಸೇರಿಸಿಕೊಳ್ಳುವಂತೆ ಕೇಂದ್ರ ಮತ್ತು ಸೇನೆಗೆ ನಿರ್ದೇಶನ ನೀಡಿತು.
ಹುದ್ದೆಗಳಲ್ಲಿ ತಾರತಮ್ಯವಿಲ್ಲ ಎಂದು ಹೇಳಿಕೊಂಡರೂ ಮಹಿಳೆಯರಿಗೆ ಕಡಿಮೆ ಹುದ್ದೆಗಳನ್ನು ಮೀಸಲಿಟ್ಟಿದ್ದಕ್ಕಾಗಿ ನ್ಯಾಯಾಲಯವು ಸರ್ಕಾರವನ್ನು ಪ್ರಶ್ನಿಸಿದೆ. ಜೆಎಜಿ ಹುದ್ದೆಗಳು ಲಿಂಗ ತಟಸ್ಥವಾಗಿವೆ ಮತ್ತು 50:50 ಅನುಪಾತವು 2023 ರಿಂದ ಆಯ್ಕೆ ಅನುಪಾತವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಸಲ್ಲಿಸಿದ ವಾದಗಳಿಂದ ನ್ಯಾಯಾಲಯವು ಮನವರಿಕೆಯಾಗಲಿಲ್ಲ.