ನವದೆಹಲಿ: ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರಲು ಭಾರತವು ವಿವಿಧ ಪ್ರಮುಖ ದೇಶಗಳಿಗೆ ಸರ್ವಪಕ್ಷಗಳ ನಿಯೋಗ ಕಳುಹಿಸಲು ನಿರ್ಧರಿಸಿದ್ದು, ಕಾಂಗ್ರೆಸ್ ಸಹ ನಿಯೋಗದಲ್ಲಿ ಸೇರುವುದಾಗಿ ಶುಕ್ರವಾರ ಹೇಳಿದೆ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಯಾವ ಸಂಸದರು ಪಕ್ಷವನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈಗಾಗಲೇ ಈ ವಿಷಯದ ಬಗ್ಗೆ ಖರ್ಗೆ ಅವರೊಂದಿಗೆ ಮಾತನಾಡಿದ್ದಾರೆ. ಖರ್ಗೆ ಅವರು ಅದಕ್ಕೆ ತಕ್ಕಂತೆ ಪಕ್ಷದ ನಾಯಕರನ್ನು ನಿಯೋಜಿಸುತ್ತಾರೆ" ಎಂದು ಹೇಳಿದರು.
ಕಾಂಗ್ರೆಸ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿದೆ. ಆದರೆ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ನಡೆಸಬೇಕು ಮತ್ತು ಸಂಘರ್ಷದ ನಂತರದ ಪರಿಣಾಮಗಳ ಕುರಿತು ಚರ್ಚಿಸಲು ಸಂಸತ್ ವಿಶೇಷ ಅಧಿವೇಶನ ಕರೆಯಬೇಕೆಂಬ ತಮ್ಮ ನಿರಂತರ ಬೇಡಿಕೆಯನ್ನು ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ ಎಂದು ಜೈರಾಮ್ ರಮೇಶ್ ತಿಳಿಸಿದರು.
"ನಾವು ಸರ್ವಪಕ್ಷ ಸಭೆಗೆ ಒತ್ತಾಯಿಸಿದ್ದೇವೆ. ಎರಡು ಬಾರಿ ಸರ್ವಪಕ್ಷ ಸಭೆ ನಡೆದಿದ್ದರೂ, ಪ್ರಧಾನಿ ಮೋದಿ ಸಭೆಗಳಲ್ಲಿ ಹಾಜರಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಂಸತ್ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
"ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ವಿವಿಧ ದೇಶಗಳಿಗೆ ವಿವರಿಸಲು ಕೇಂದ್ರ ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳ ಸಂಸದರ ನಿಯೋಗವನ್ನು ಪ್ರಮುಖ ದೇಶಗಳಿಗೆ ಕಳುಹಿಸಲಿದೆ ಎಂದು ನಾವು ಕೇಳಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಅತ್ಯಂತ ಪ್ರಮುಖವಾಗಿಟ್ಟುಕೊಂಡು, ಕಾಂಗ್ರೆಸ್ ಸರ್ವಪಕ್ಷಗಳ ಸಂಸದರ ನಿಯೋಗದ ಭಾಗವಾಗುತ್ತದೆ. ನಿಯೋಗಕ್ಕೆ ಸೇರಲು ನಮಗೆ ಆಹ್ವಾನ ಬಂದರೆ, ಕಾಂಗ್ರೆಸ್ ಪಕ್ಷವೂ ಸೇರುತ್ತದೆ. ಕೇಂದ್ರ ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಮಾತನಾಡಿದ್ದಾರೆ ಮತ್ತು ಅವರು ಪಕ್ಷದ ನಾಯಕರನ್ನು ನಿಯೋಜಿಸುತ್ತಾರೆ" ಎಂದು ರಮೇಶ್ ಹೇಳಿದರು.