ದೇಶ

ಭಯೋತ್ಪಾದನೆಗೆ ಪ್ರೋತ್ಸಾಹ: ಪಾಕಿಸ್ತಾನಕ್ಕೆ ನೀಡಿರುವ ಹಣಕಾಸು ನೆರವು ಮರುಪರಿಶೀಲಿಸಿ; IMFಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒತ್ತಾಯ

ಪಾಕಿಸ್ತಾನಕ್ಕೆ ಯಾವುದೇ ರೀತಿಯ ಹಣಕಾಸು ನೆರವು ನೀಡಿದರೂ ಅದು ಭಯೋತ್ಪಾದನೆ ನೀಡಿದ ನೆರವಾಗಿರುತ್ತದೆ. ಹೀಗಾಗಿ, ಐಎಂಎಫ್ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು.

ಭುಜ್ (ಗುಜರಾತ್): ಪಾಕಿಸ್ತಾನದ ಪರಮಾಣು ಅಣ್ವಸ್ತ್ರ ಮೇಲ್ವಿಚಾರಣೆಯನ್ನು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (IAEA)ಗೆ ವಹಿಸುವಂತೆ ಕೋರಿದ ಒಂದು ದಿನದ ನಂತರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನಕ್ಕೆ ನೀಡಿರುವ ಹಣಕಾಸು ನೆರವು ಮರುಪರಿಶೀಲಿಸುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಗೆ ಶುಕ್ರವಾರ ಒತ್ತಾಯಿಸಿದ್ದಾರೆ.

ನಿನ್ನೆಯಷ್ಟೇ ರಾಜನಾಥ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಬಾದಾಮಿ ಬಾಗ್ ಕಂಟೋನ್ಮೆಂಟ್‌'ಗೆ ಭೇಟಿ ನೀಡಿ, ಭಾರತೀಯ ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ಸಂವಾದ ನಡೆಸಿದ್ದರು.

ಇಂದು ಗುಜರಾತ್‌ನ ಭುಜ್ ವಾಯುನೆಲೆಗೆ ಭೇಟಿ ನೀಡಿದ್ದು, ವಾಯುಪಡೆಯ ಯೋಧರೊಂದಿಗೆ ಮಾತುಕತೆ ನಡೆಸಿದ್ದಾರೆ.

ನಿನ್ನೆ ಜಮ್ಮು ಮತ್ತು ಕಾಶ್ಮೀರದಲ್ಲಿದ್ದೆವು ಮತ್ತು ಇಂದು ಇಲ್ಲಿದ್ದೇವೆ, ಎರಡೂ ರಂಗಗಳಲ್ಲಿ ಸೈನ್ಯದ ಧೈರ್ಯವನ್ನು ನೋಡಿ ನನಗೆ ಹೆಮ್ಮೆ ಅನಿಸುತ್ತದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಸೇನಾ ಸಿಬ್ಬಂದಿಯ ದಕ್ಷತೆಗೆ ನಮ್ಮದೊಂದು ಸಲಾಂ ಎಂದು ಶ್ಲಾಘಿಸಿದರು.

'ಆಪರೇಷನ್ ಸಿಂಧೂರ್' ಸಮಯದಲ್ಲಿ ನೀವು ಮಾಡಿದ ಕೆಲಸವು ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತೆ ಮಾಡಿದೆ, ಪಾಕಿಸ್ತಾನದ ನೆಲದಲ್ಲಿ ಬೆಳೆಯುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತೀಯ ವಾಯುಪಡೆಗೆ ಕೇವಲ 23 ನಿಮಿಷಗಳು ಸಾಕಾಗಿದ್ದವು. ಜನರು ತಮ್ಮ ಉಪಾಹಾರ ಮತ್ತು ಪಾನೀಯಗಳನ್ನು ಮುಗಿಸಲು ತೆಗೆದುಕೊಳ್ಳುವ ಸಮಯದಲ್ಲಿ, ನೀವು ಶತ್ರುಗಳ ನೆಲೆಯನ್ನೇ ಹೊಡೆದುರುಳಿಸಿದ್ದೀರಿ. ನೀವು ಶತ್ರು ಪ್ರದೇಶದೊಳಗೆ ಬೀಳಿಸಿದ ಕ್ಷಿಪಣಿಗಳ ಪ್ರತಿಧ್ವನಿ ಇಡೀ ಜಗತ್ತಿಗೆ ಕೇಳಿಸಿದೆ. ಅರ್ಥಾತ್ ಆ ಪ್ರತಿಧ್ವನಿ ಕೇವಲ ಕ್ಷಿಪಣಿಯದ್ದಲ್ಲ, ಅದು ನಿಮ್ಮ ಶೌರ್ಯ ಮತ್ತು ಭಾರತದ ಶಕ್ತಿಯ ಪ್ರತಿಧ್ವನಿಯಾಗಿತ್ತು ಎಂದು ಶ್ಲಾಘಿಸಿದರು.

ಆಪರೇಷನ್ ಸಿಂಧೂರ್‌ನಲ್ಲಿ ನೀವೆಲ್ಲರೂ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ ಎಲ್ಲಾ ಮುಗ್ಧ ನಾಗರಿಕರಿಗೆ ಮತ್ತು ಆಪರೇಷನ್ ಸಿಂಧೂರ್' ಸಮಯದಲ್ಲಿ ಹುತಾತ್ಮರಾದ ನಮ್ಮ ಸೈನಿಕರಿಗೆ ನಾನು ನನ್ನ ಗೌರವ ಸಲ್ಲಿಸುತ್ತೇನೆ. ನಮ್ಮ ಗಾಯಗೊಂಡ ಸೈನಿಕರ ಧೈರ್ಯಕ್ಕೆ ನಾನು ನಮಸ್ಕರಿಸುತ್ತೇನೆ ಮತ್ತು ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಆಪರೇಷನ್ ಸಿಂಧೂರ್ ಗೆ ಯಾರು ಹೆಸರಿಟ್ಟರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ ಇದಕ್ಕೆ ದೇಶದ ಯಶಸ್ವಿ ಪ್ರಧಾನಿ ಹೆಸರಿಟ್ಟಿದ್ದಾರೆ, ನಮ್ಮ ದೇಶವು ಭುಜ್‌ನಲ್ಲಿ ಬಲವಾದ ತೋಳನ್ನು ಹೊಂದಿದೆ, ನಿಮ್ಮೆಲ್ಲರ ನಡುವೆ ಇರುವುದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಈ ಭುಜ್ 1965 ರಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ. ಈ ಭುಜ್ 1971 ರಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ. ಇಂದು ಮತ್ತೊಮ್ಮೆ ಈ ಭುಜ್ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ. ಇಲ್ಲಿನ ಮಣ್ಣಿನಲ್ಲಿ ದೇಶಭಕ್ತಿಯ ಪರಿಮಳವಿದೆ. ಇಲ್ಲಿನ ಸೈನಿಕರು ಭಾರತವನ್ನು ರಕ್ಷಿಸುವ ದೃಢ ಸಂಕಲ್ಪವನ್ನು ಹೊಂದಿದ್ದಾರೆ. ನಾನು ನಿಮ್ಮೆಲ್ಲ ವಾಯು ಯೋಧರಿಗೆ, ಸಶಸ್ತ್ರ ಪಡೆಗಳು ಮತ್ತು ಬಿಎಸ್‌ಎಫ್‌ನ ಎಲ್ಲಾ ಧೈರ್ಯಶಾಲಿ ಸೈನಿಕರಿಗೆ ನಮಸ್ಕರಿಸುತ್ತೇನೆಂದು ತಿಳಿಸಿದರು,

ಭಾರತವು ಪಾಕಿಸ್ತಾನವನ್ನು ಪರೀಕ್ಷೆಯಲ್ಲಿರಿಸಿದೆ. ಅವರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಲು ನಾವು ಕಾಲಾವಕಾಶ ನೀಡುತ್ತೇವೆ. ಒಂದು ವೇಳೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದು ಅವರ ನಡವಳಿಕೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಾಕ್ ವಿರುದ್ಧ ನಾವು ವಲ್ಲದ ಮನಸ್ಸಿನಿಂದ ಕದನ ವಿರಾಮ ಒಪ್ಪಿಕೊಂಡಿದ್ದೇವೆ. ಆದರೂ ನಮ್ಮ ನೆರೆಯ ರಾಷ್ಟ್ರ ಜಮ್ಮು-ಕಾಶ್ಮೀರ, ಗುಜರಾತ್, ಪಂಜಾಬ್, ರಾಜಸ್ಥಾನ ಸೇರಿದಂತೆ ಮತ್ತಿತರ ಕಡೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದೆ. ಪಾಕಿಸ್ತಾನದ ನಡವಳಿಕೆ ಮೇಲೆ ಮುಂದಿನ ಎಲ್ಲ ಬೆಳವಣಿಗೆಗಳೂ ನಿಂತಿವೆ. ತಮ್ಮ ತಪ್ಪು ತಿದ್ದಿಕೊಂಡು ಮುನ್ನಡೆದರೆ ಸಮಸ್ಯೆಯಿಲ್ಲ. ನೀವು ಮತ್ತೆ ಹಳೆ ಚಾಳಿಯನ್ನೇ ಪುನರಾವರ್ತಿಸಿದರೆ ಭಾರತ ಕಠಿಣ ಶಿಕ್ಷೆ ನೀಡುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದರು.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ನಮ್ಮ ಸೇನಾಪಡೆ ನಿಖರ ದಾಳಿ ನಡೆಸಿದೆ. ಪರಿಣಾಮ ನೆರೆರಾಷ್ಟ್ರದ ಎಂಟಕ್ಕೂ ಹೆಚ್ಚು ವಾಯುನೆಲೆಗಳು, ನೂರಕ್ಕೂ ಹೆಚ್ಚು ಉಗ್ರರು, ಹಲವಾರು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿವೆ. ಈ ಪರಾಕ್ರಮದಲ್ಲಿ ಭಾಗಿಯಾದ ಭಾರತೀಯ ಸೇನಾಪಡೆಗಳನ್ನು ನಾನು ಅಭಿನಂದಿಸುತ್ತೇನೆ ನಿಮ್ಮ ಹೋರಾಟ ಪದಗಳಲ್ಲಿ ಬಣ್ಣಿಸಲು ಅಸಾಧ್ಯ.

ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಅದು ಮುಗಿಯುವುದೂ ಇಲ್ಲ. ಈಗ ನಾವು ಪಾಕಿಸ್ತಾನಕ್ಕೆ ತೋರಿಸಿರುವುದು ಟ್ರೈಲರ್ ಅಷ್ಟೇ. ಮುಂದಿನ ದಿನಗಳಲ್ಲಿ ಮಂಗಳ ಗ್ರಹವನ್ನೂ ತೋರಿಸುವ ಕೆಲಸವನ್ನು ನಮ್ಮ ಸೇನಾಪಡೆ ಮಾಡಲಿದೆ. ಭಾರತವನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡಿರುವುದನ್ನು ಮರುಪರಿಶೀಲಿಸುವಂತೆ ಐಎಂಎಫ್'ಗೆ ಒತ್ತಾಯಿಸಿದ ಅವರು, ಪಾಕಿಸ್ತಾನಕ್ಕೆ ಯಾವುದೇ ರೀತಿಯ ಹಣಕಾಸು ನೆರವು ನೀಡಿದರೂ ಅದು ಭಯೋತ್ಪಾದನೆ ನೀಡಿದ ನೆರವಾಗಿರುತ್ತದೆ. ಹೀಗಾಗಿ ಐಎಂಎಫ್ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದರು.

ಪಾಕಿಸ್ತಾನಕ್ಕೆ ಐಎಂಎಫ್ ವಿಸ್ತ್ರತ ನಿಧಿ ಸೌಲಭ್ಯ ಕಾರ್ಯಕ್ರಮದಡಿ 1,023 ಶತಕೋಟಿ ಅಮೆರಿಕನ್ ಡಾಲರ್ ಹಣವನ್ನು ಬಿಡುಗಡೆ ಮಾಡಿದೆ. ಈ ಹಣವನ್ನು ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳ ಪುನಶ್ವೇತನಕ್ಕೆ ಬಳಸಿಕೊಳ್ಳುತ್ತದೆ.

ಪಾಕ್ ಭಯೋತ್ಪಾದಕರ ಮೂಲ ಚಟುವಟಿಕೆಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯನ್ನು ಬಳಕೆ ಮಾಡುತ್ತಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರದಿಂದ ಧ್ವಂಸಗೊಂಡಿರುವ ಉಗ್ರರ ಕಟ್ಟಡಗಳ ಪುನಶ್ವೇತನಕ್ಕೆ ಹಣ ಬಳಕೆ ಮಾಡುತ್ತಿದೆ. ಆದ್ದರಿಂದ ವಿಶ್ವ ಸಮುದಾಯ ಈ ರಾಷ್ಟ್ರಕ್ಕೆ ಹಣ ಬಿಡುಗಡೆ ಮಾಡಿರುವ ಅದನ್ನು ಯಾವ ಉದ್ದೇಶಕ್ಕೆ ಬಳಸಿದ್ದೇವೆ ಎಂಬ ಬಗ್ಗೆ ಸ್ಪಷ್ಟನೆ ಕೇಳುವಂತೆ ಒತ್ತಾಯಿಸಿದರು.

ನೀವು ಹಣ ನೀಡುವುದರ ಬಗ್ಗೆ ನಮ್ಮ ಆಕ್ಷೇಪವಿಲ್ಲ, ಅದು ಸದುದ್ದೇಶಕ್ಕೆ ಬಳಕೆಯಾಗಿದೆ ಎಂಬುದನ್ನು ಅವಲೋಕನ ಮಾಡಬೇಕು ಎಂದು ಮನವಿ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

SCROLL FOR NEXT