ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್), ಪಾಕಿಸ್ತಾನ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಸೂಕ್ಷ್ಮ ಗಡಿ ಜಿಲ್ಲೆಯಾದ ಕಚ್‌ನ 28 ವರ್ಷದ ಆರೋಗ್ಯ ಕಾರ್ಯಕರ್ತನನ್ನು ಬಂಧಿಸಿದೆ.
ಇದರೊಂದಿಗೆ ಕೇವಲ ಎಂಟು ತಿಂಗಳಲ್ಲಿ ಗುಜರಾತ್‌ನಲ್ಲಿ ಮೂರನೇ ಉನ್ನತ ಮಟ್ಟದ ಗೂಢಚಾರ ಬಂಧನ ಇದಾಗಿದ್ದು, ರಾಷ್ಟ್ರೀಯ ಭದ್ರತಾ ಸಂಸ್ಥೆಗಳನ್ನು ಆತಂಕಕ್ಕೀಡು ಮಾಡಿದೆ.
ಬಂಧಿತ ಆರೋಪಿಯನ್ನು ಮಾತಾ-ನಾ-ಮಧ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ಬಹುಪಯೋಗಿ ಆರೋಗ್ಯ ಕಾರ್ಯಕರ್ತ ಸಹದೇವ್‌ಸಿನ್ಹ್ ದೀಪುಭಾ ಗೋಹಿಲ್ ಎಂದು ಗುರುತಿಸಲಾಗಿದೆ.
ಆರೋಪಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಭಾರತೀಯ ನೌಕಾಪಡೆಗೆ ಸಂಬಂಧಿಸಿದ ವರ್ಗೀಕೃತ ಫೋಟೋಗಳು ಮತ್ತು ವಿಡಿಯೋಗಳನ್ನು ಪಾಕಿಸ್ತಾನಿ ಗುಪ್ತಚರ ಏಜೆಂಟ್ ಬಳಸುವ "ಅದಿತಿ ಭಾರದ್ವಾಜ್" ಎಂದು ಮಾತ್ರ ಗುರುತಿಸಲ್ಪಟ್ಟ ಹ್ಯಾಂಡ್ಲರ್‌ಗೆ ರವಾನಿಸಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಎಟಿಎಸ್ ಪತ್ರಿಕಾ ಪ್ರಕಟಣೆಯ ಪ್ರಕಾರ, ಗೋಹಿಲ್ ಜೂನ್ ಅಥವಾ ಜುಲೈ 2023ರಲ್ಲಿ ವಾಟ್ಸಾಪ್ ಮೂಲಕ "ಅದಿತಿ ಭಾರದ್ವಾಜ್" ಅವರ ಸಂಪರ್ಕಕ್ಕೆ ಬಂದಿದ್ದು, ನಂತರ ಅವರನ್ನು ವ್ಯವಸ್ಥಿತವಾಗಿ ಕಛ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮತ್ತು ಇತ್ತೀಚೆಗೆ ಪೂರ್ಣಗೊಂಡ ಮಿಲಿಟರಿ ಸೌಲಭ್ಯಗಳ ಚಿತ್ರಗಳು ಸೇರಿದಂತೆ ಸೂಕ್ಷ್ಮ ವಿಷಯಗಳನ್ನು ಸೋರಿಕೆ ಮಾಡಲು ತರಬೇತಿ ನೀಡಲಾಗಿದೆ ಎಂದು ಎಟಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.