ಅಮೃತಸರ: ಅಮೃತಸರದ ಚೆಹೆರ್ತಾ ಪ್ರದೇಶದಲ್ಲಿ ಭಾನುವಾರ ಶಿರೋಮಣಿ ಅಕಾಲಿ ದಳದ ಕೌನ್ಸಿಲರ್ ಒಬ್ಬರನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ವ್ಯಕ್ತಿಯನ್ನು ಹರ್ಜಿಂದರ್ ಸಿಂಗ್ ಜಂಡಿಯಾಲ ಎಂದು ಗುರುತಿಸಲಾಗಿದ್ದು, ಅವರು ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 2ರ ಕೌನ್ಸಿಲರ್ ಆಗಿದ್ದರು.
ಬೈಕ್‌ನಲ್ಲಿ ಬಂದ ಮೂರರಿಂದ ನಾಲ್ಕು ಅಪರಿಚಿತ ವ್ಯಕ್ತಿಗಳು ಕೌನ್ಸಿಲರ್ ಅವರನ್ನು ಅಡ್ಡಗಟ್ಟಲು ಪ್ರಯತ್ನಿಸಿದರು ಮತ್ತು ಅವರ ಮೇಲೆ ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿದರು ಎಂದು ಎಡಿಸಿಪಿ ಹರ್ಪಾಲ್ ಸಿಂಗ್ ರಾಂಧವಾ ಹೇಳಿದ್ದಾರೆ.
ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಂಗ್ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕೌನ್ಸಿಲರ್‌ಗೆ ಬೆದರಿಕೆ ಕರೆಗಳು ಬರುತ್ತಿದ್ದವು ಮತ್ತು ಆ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಕಾಲಿ ದಳದ ಹಿರಿಯ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ "ದಯನೀಯ"ವಾಗಿದೆ ಎಂದು ಬಿಕ್ರಮ್ ಸಿಂಗ್ ಅವರು ಪಂಜಾಬ್‌ನ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.