ಪಠಾಣ್: 'ದೃಶ್ಯಂ' ಸಿನಿಮಾದಿಂದ ಪ್ರೇರಣೆ ಪಡೆದ ವಿವಾಹಿತ ಮಹಿಳೆಯೊಬ್ಬರು, ತನ್ನ ಲವರ್ ಜೊತೆಗೆ ಸೇರಿಕೊಂಡು ಮಧ್ಯ ವಯಸ್ಸಿನ ಅಮಾಯಕ ವ್ಯಕ್ತಿಯನ್ನು ಕೊಂದು, ತಾನೇ ಸತ್ತಂತೆ ಮೆಗಾ ಪ್ಲಾನ್ ಮಾಡಿದ್ದು, ಕೊನೆಗೆ ಪೊಲೀಸರಿಗೆ ಅಂದರ್ ಆಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಅರೆಬೆಂದ ಶವಕ್ಕೆ ತನ್ನ ಬಟ್ಟೆ ಹಾಗೂ ಕಾಲುಂಗರ ಹಾಕುವ ಮೂಲಕ ಪ್ರಕರಣದಿಂದ ಬಚಾವ್ ಆಗಿ ಗಂಡನ ಬಿಟ್ಟು ಲವರ್ ಜೊತೆಗೆ ಪರಾರಿಯಾಗಲು ಕಿರಾತಕ ಮಹಿಳೆ ಪ್ಲಾನ್ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ
ಅಂದಹಾಗೆ, ಪಠಾಣ್ ನ ಸಂತಾಲ್‌ಪುರ ತಾಲೂಕಿನ ಜಖೋತ್ರಾ ಗ್ರಾಮದ ವ್ಯಕ್ತಿಯ ಅರೆಬೆಂದ ಶವ ಮಂಗಳವಾರ ರಾತ್ರಿ ಪತ್ತೆಯಾಗಿದ್ದು, ಪೊಲೀಸರು ಗೀತಾ ಅಹಿರ್ (22) ಮತ್ತು ಆಕೆಯ ಪ್ರಿಯಕರ ಭರತ್ ಅಹಿರ್ (21) ಅವರನ್ನು ಬುಧವಾರ ಮುಂಜಾನೆ ಪಾಲನ್‌ಪುರ ರೈಲು ನಿಲ್ದಾಣದಿಂದ ಬಂಧಿಸಿದ್ದಾರೆ. ‘ದೃಶ್ಯಂ’ ಸಿನಿಮಾದಿಂದ ಸ್ಫೂರ್ತಿ ಪಡೆದು ತಾನೇ ಸತ್ತಂತೆ ನಾಟಕವಾಡಲು ಸಂಚು ರೂಪಿಸಿದ್ದಾಗಿ ಆರೋಪಿ ಮಹಿಳೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ.
ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಮಹಿಳೆ: ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಠಾಣ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿ ಕೆ ನಯಿ, "ಜಖೋತ್ರಾದಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದ ಗೀತಾ ಈ ಸಂಚು ರೂಪಿಸಿದ್ದರು. ಶವವೊಂದನ್ನು ವ್ಯವಸ್ಥೆ ಮಾಡಿದ್ರೆ, ನಾನೇ ಸತ್ತಿರುವಂತೆ ಯಾಮಾರಿಸಬಹುದು. ನಂತರ ಗುಜರಾತ್ ನಿಂದ ಹೋಗಿ ಇಬ್ಬರು ಒಟ್ಟಿಗೆ ಇರಬಹುದು ಎಂದು ಪ್ರಿಯಕರನ ಮನವೊಲಿಸಿದ್ದಳು. ಮಂಗಳವಾರ ರಾತ್ರಿ ಎಲ್ಲರೂ ಮಲಗಿದ್ದಾಗ ಗೀತಾ ಮನೆಯಿಂದ ಹೊರಗೆ ಬಂದಿದ್ದಾರೆ. ನಂತರ, ಆಕೆಯ ಪತಿ ಮತ್ತು ಇತರ ಕುಟುಂಬ ಸದಸ್ಯರು ಆಕೆಗಾಗಿ ಹುಡುಕಿದಾಗ, ಗ್ರಾಮದ ಹೊರವಲಯದಲ್ಲಿರುವ ಕೆರೆವೊಂದರ ಬಳಿ ಅರ್ಧ ಸುಟ್ಟ ಶವ ಬಿದ್ದಿರುವುದನ್ನು ಪತ್ತೆ ಹಚ್ಚಿದ್ದಾರೆ.
ಮೃತದೇಹಕ್ಕೆ ಕಾಲುಂಗುರ, ಬಟ್ಟೆ ತೊಡಿಸಿದ ಕಿರಾತಕಿ: ಗೀತಾ ಅವರ ಘಾಗ್ರಾ (ಉದ್ದನೆಯ ಸಾಂಪ್ರದಾಯಿಕ ಸ್ಕರ್ಟ್) ಮತ್ತು ಕಾಲುಂಗುರಗಳು ಮೃತದೇಹದಲ್ಲಿ ಕಂಡುಬಂದಿದ್ದರಿಂದ ಆರಂಭದಲ್ಲಿ ಅದು ಗೀತಾ ಶವ ಎಂದು ಅವರ ಸಂಬಂಧಿಕರು ಭಾವಿಸಿದ್ದರು. ಆದರೆ, ಶವವನ್ನು ಮನೆಗೆ ತಂದ ನಂತರ, ಅದು ಪುರುಷನ ಶವ ಎಂಬುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ನಂತರ ಕೊಲೆ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದೇವೆ ಎಂದು ಎಸ್ಪಿ ಹೇಳಿದರು.
ತದನಂತರ ಮೃತ ವ್ಯಕ್ತಿಯನ್ನು 56 ವರ್ಷದ ಹರ್ಜಿಭಾಯಿ ಸೋಲಂಕಿ ಎಂದು ಗುರುತಿಸಲಾಗಿದೆ. ಭರತ್‌ನನ್ನು ಪ್ರೀತಿಸುತ್ತಿದ್ದ ಗೀತಾ, ಇಬ್ಬರೂ ರೈಲಿನಲ್ಲಿ ರಾಜಸ್ಥಾನಕ್ಕೆ ಪರಾರಿಯಾಗುತ್ತಿದ್ದಾಗ ಪೊಲೀಸ್ ತಂಡವು ಇಬ್ಬರನ್ನೂ ಪಾಲನ್‌ಪುರ ರೈಲು ನಿಲ್ದಾಣದಿಂದ ಬಂಧಿಸಿದೆ. ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿರುವುದಾಗಿ SP ತಿಳಿಸಿದರು.
ಡ್ರಾಪ್ ಕೊಡುವ ನೆಪದಲ್ಲಿ ಕೊಲೆ:
"ದೃಶ್ಯಂ" ಮತ್ತು "ದೃಶ್ಯಂ 2" ಸಿನಿಮಾದಿಂದ ಪ್ರೇರಣೆ ಪಡೆದು ನಾನೇ ಈ ಪ್ಲಾನ್ ಮಾಡಿದ್ದೆ. ಅದಕ್ಕಾಗಿ ಕೊಲೆ ಮಾಡಲು ವ್ಯಕ್ತಿ ಅಥವಾ ಮಹಿಳೆಯೊಬ್ಬರನ್ನು ಹುಡಕಲು ಭರತ್ ಆರಂಭಿಸಿದ್ದ. ಮೇ 26 ರಂದು ಸೋಲಂಕಿ ಸಿಕ್ಕಿದ್ದು, ಆತನಿಗೆ ಬೈಕ್ ನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ಕೂರಿಸಿಕೊಂಡಿದ್ದು, ಈಗಾಗಲೇ ಪ್ಲಾನ್ ಮಾಡಿದಂತೆ ಜಾಗವೊಂದರಲ್ಲಿ ಸೋಲಂಕಿಯನ್ನು ಇಳಿಸಿ, ಆತನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಬಳಿಕ ಕೆರೆಯ ಬಳಿಗೆ ಶವ ತೆಗೆದುಕೊಂಡು ಹೋಗಿದ್ದರು. ಈಗಾಗಲೇ ಪ್ಲಾನ್ ಮಾಡಿದಂತೆ ಗೀತಾ ಮಂಗಳವಾರ ರಾತ್ರಿ ಎಲ್ಲರೂ ಮಲಗಿರುವಾಗ ಪೆಟ್ರೋಲ್ ಬಾಟಲಿ ಜೊತೆಗೆ ಕೆರೆ ಬಳಿ ತಲುಪಿದ್ದರು.
ಪೆಟ್ರೋಲ್ ನಿಂದ ಬೆಂಕಿ ಹಚ್ಚಿದ ಗೀತಾ: ನಂತರ ಸೋಲಂಕಿ ಮೃತದೇಹಕ್ಕೆ ಕಾಲುಂಗುರ ಹಾಗೂ ಬಟ್ಟೆಯನ್ನು ಹಾಕಿದ್ದ ಗೀತಾ, ನಂತರ ಪೆಟ್ರೋಲ್ ನಿಂದ ಬೆಂಕಿ ಹಚ್ಚಿದ್ದಾಳೆ. ತದನಂತರ ರೈಲಿನಲ್ಲಿ ಜೋಧಪುರಕ್ಕೆ ತೆರಳಲು ಪಾಲಾನ್ ಪುರ ರೈಲು ನಿಲ್ದಾಣಕ್ಕೆ ಹೋಗಿದ್ದರು. ಆದಾಗ್ಯೂ ನಮ್ಮ ತಂಡ ಅಲ್ಲಿಯೇ ಅವರನ್ನು ಬಂಧಿಸಿದೆ ಎಂದು SP ನಯಿ ತಿಳಿಸಿದರು.