ನವದೆಹಲಿ: ರಕ್ಷಣಾ ಯೋಜನೆಗಳಲ್ಲಿನ ನಿರಂತರ ವಿಳಂಬಗಳ ಬಗ್ಗೆ ವಾಯುಪಡೆ ಮುಖ್ಯಸ್ಥ ಮತ್ತು ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಗುರುವಾರ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
CII ವಾರ್ಷಿಕ ವ್ಯಾಪಾರ ಶೃಂಗಸಭೆ 2025 ರಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್, ಯೋಜನೆಯ ಕಾರ್ಯಗತಗೊಳಿಸುವಿಕೆಯಲ್ಲಿ ಪದೇ ಪದೇ ವಿಳಂಬ ಮಾಡಲಾಗುತ್ತಿದೆ ಎಂದು ಹೇಳುವ ಮೂಲಕ ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸದ ಸರ್ಕಾರದ ಅಭ್ಯಾಸವನ್ನು ಟೀಕಿಸಿದರು.
ವಿಮಾನ ಪೂರೈಕೆಯಂತಹ ಯೋಜನೆಗಳನ್ನು ಸಕಾಲದಲ್ಲಿ ಪೂರೈಸುತ್ತಿಲ್ಲ. ಇದರಿಂದ ಸವಾಲಿನ ಪರಿಸ್ಥಿತಿವೇರ್ಪಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಏರ್ ಚೀಫ್ ಮಾರ್ಷಲ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
'ನಾನು ಯೋಚಿಸಿದಂತೆ ಒಂದೇ ಒಂದು ಯೋಜನೆಯು ಸಕಾಲದಲ್ಲಿ ಪೂರ್ಣಗೊಂಡಿಲ್ಲ. ಇದರ ಕಡೆಗೆ ನಾವು ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು.
ಒಪ್ಪಂದಕ್ಕೆ ಸಹಿ ಮಾಡುವಾಗ, ಕೆಲವೊಮ್ಮೆ ಅದು ಬರುವುದಿಲ್ಲ ಎಂದು ನಮಗೆ ಖಾತ್ರಿ ಇರುತ್ತದೆ. ಆದರೆ ನಾವು ಒಪ್ಪಂದಕ್ಕೆ ಸಹಿ ಹಾಕುತ್ತೇವೆ. ನಂತರ ಆ ಪ್ರಕ್ರಿಯೆಯು ಕ್ಷೀಣಿಸುತ್ತದೆ. ಸಾಧಿಸಲು ಸಾಧ್ಯವಾಗದದ್ದನ್ನು ನಾವು ಏಕೆ ಭರವಸೆ ನೀಡಬೇಕು? ಎಂದು ಏರ್ ಮಾರ್ಷಲ್ ಸಿಂಗ್ ಪ್ರಶ್ನಿಸಿದರು.
ಆಪರೇಷನ್ ಸಿಂಧೂರ್ ಅನ್ನು ರಾಷ್ಟ್ರದ ಗೆಲುವು ಎಂದು ಶ್ಲಾಘಿಸಿದ ಅವರು, ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸಶಸ್ತ್ರ ಪಡೆಗಳು, ಏಜೆನ್ಸಿಗಳು ಮತ್ತು ಪ್ರತಿಯೊಬ್ಬ ಭಾರತೀಯ ನಾಗರಿಕರ ಸಾಮೂಹಿಕ ಪ್ರಯತ್ನಗಳಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿಸಿದರು.