ಐಜಾಲ್: ದಕ್ಷಿಣ ಮಿಜೋರಾಂನ ಲಾಂಗ್ಟ್ಲೈ ಪಟ್ಟಣದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ ಐದು ಮನೆಗಳು ಮತ್ತು ಒಂದು ಹೋಟೆಲ್ ಕುಸಿದು ಹಲವಾರು ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಲಾಂಗ್ಟ್ಲೈನ ಬಜಾರ್ ವೆಂಗ್ ಮತ್ತು ಚಾಂದ್ಮೇರಿ ಪ್ರದೇಶಗಳ ಗಡಿ ಪ್ರದೇಶದಲ್ಲಿ ನಿನ್ನೆ ಶುಕ್ರವಾರ ರಾತ್ರಿ 10:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮನೆಗಳು ಮತ್ತು ಹೊಟೇಲ್ ಮೇಲೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋಟೆಲ್‌ನಲ್ಲಿ ತಂಗಿದ್ದ ಮ್ಯಾನ್ಮಾರ್‌ನ ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಂಗ್ಟ್ಲೈ ಜಿಲ್ಲೆಯ ಅತಿದೊಡ್ಡ ನಾಗರಿಕ ಸಮಾಜ ಸಂಘಟನೆಯಾದ ಯಂಗ್ ಲೈ ಅಸೋಸಿಯೇಷನ್ (YLA) ನ ಸ್ವಯಂಸೇವಕರ ಜೊತೆಗೆ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SRDF) ಮತ್ತು 3 ನೇ ಭಾರತೀಯ ಮೀಸಲು ಬೆಟಾಲಿಯನ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಘಟನೆಯ ವಿವರವಾದ ವರದಿಗಾಗಿ ಕಾಯಲಾಗುತ್ತಿದೆ. ಈಶಾನ್ಯ ಭಾರತ ಭಾಗದಲ್ಲಿ ಮೊನ್ನೆ ಶುಕ್ರವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವಾರು ಸ್ಥಳಗಳಲ್ಲಿ ಭೂಕುಸಿತಗಳು ಮತ್ತು ಬಂಡೆಗಳು ಕುಸಿದಿವೆ.