ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿಯಲ್ಲಿ ಪ್ರಯಾಣಿಕರ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 18 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸುಮಾರು 70 ಪ್ರಯಾಣಿಕರಿದ್ದ ಪ್ರಯಾಣಿಕರ ಬಸ್‌ಗೆ ಸರಕು ಸಾಗಾಣಿಕಾ ಟ್ರಕ್ ಢಿಕ್ಕಿಯಾಗಿದೆ. ಪರಿಣಾಮ ಬಸ್ ನಲ್ಲಿದ್ದವರ ಪೈಕಿ 18 ಮಂದಿ ಸಾವನಮ್ನಪ್ಪಿದ್ದ ಹಲವರು ಗಾಯಗೊಂಡಿದ್ದಾರೆ.
ಜಲ್ಲಿಕಲ್ಲು ಸಾಗಿಸುತ್ತಿದ್ದ ಬೃಹತ್ ಟ್ರಕ್ ಬಸ್ ಗೆ ಢಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಟ್ರಕ್ ಗುದ್ದಿದ ರಭಸದಿಂದಾಗಿ ಟ್ರಕ್ ನಲ್ಲಿದ್ದ ಜಲ್ಲಿಕಲ್ಲುಗಳು ಬಸ್ ನೊಳಗೆ ಬಿದ್ದಿವೆ. ಜಲ್ಲಿಕಲ್ಲುಗಳಲ್ಲಿ ಕೆಲವು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.
ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆಘಾತ ವ್ಯಕ್ತಪಡಿಸಿದ ಸಿಎಂ ರೇವಂತ್ ರೆಡ್ಡಿ
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ದುರಂತದ ಬಗ್ಗೆ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಅಪಘಾತ ಸ್ಥಳಕ್ಕೆ ತಕ್ಷಣ ತಲುಪಲು ಮತ್ತು ಅಗತ್ಯವಿರುವ ಎಲ್ಲಾ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳ ಕುರಿತು ತಮಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿ ಸೂಚನೆ ನೀಡಿದರು.
ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವಂತೆ ಅವರು ರಂಗಾರೆಡ್ಡಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುವಂತೆ ಸಚಿವರು ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು ಎನ್ನಲಾಗಿದೆ.