ತಂದೂರು: "ದಯವಿಟ್ಟು ನಮ್ಮ ಹೆಣ್ಣುಮಕ್ಕಳನ್ನು ನಮ್ಮ ಮನೆಗೆ ವಾಪಸ್ ಕರೆತನ್ನಿ" ಎಂದು ರಂಗಾರೆಡ್ಡಿ ಜಿಲ್ಲೆಯ ತಂದೂರಿನಲ್ಲಿ ಸೋಮವಾರ ಬೆಳಗ್ಗೆ ಟ್ರಕ್-ಬಸ್ ಡಿಕ್ಕಿಯಲ್ಲಿ ಸಾವನ್ನಪ್ಪಿದ ತನುಷಾ, ಸಾಯಿ ಪ್ರಿಯಾ ಮತ್ತು ನಂದಿನಿ ಎಂಬ ಮೂವರು ಸಹೋದರಿಯರ ಪೋಷಕರ ಬೇಡಿಕೆ.
ಅಪಘಾತದ ಸ್ಥಳದಲ್ಲಿ ಅವರ ತಾಯಿ ಅಂಬಿಕಾ ದುಃಖದಿಂದ ಅಳುತ್ತಿದ್ದರು. "ಓ ದೇವರೇ! ನನ್ನ ಮೂವರು ಮಕ್ಕಳನ್ನು ಯಾರು ವಾಪಸ್ ಕರೆತರುತ್ತಾರೆ? ಅವರು ಏನು ಪಾಪ ಮಾಡಿದರು?" ಎಂದು ಕಣ್ಣೀರಿಟ್ಟರು.
ಈ ಮೂವರು ಸಹೋದರಿಯರು ಶುಕ್ರವಾರ ಹೈದರಾಬಾದ್‌ಗೆ ಹಿಂತಿರುಗಬೇಕಿತ್ತು. ಆದರೆ ಅಂಬಿಕಾ ಅವರನ್ನು ವಾರಾಂತ್ಯದಲ್ಲಿ ಇರುವಂತೆ ಕೇಳಿಕೊಂಡಿದ್ದರು ಮತ್ತು ತನ್ನ ಹೆಣ್ಣುಮಕ್ಕಳೊಂದಿಗೆ ಶನಿವಾರ, ಭಾನುವಾರ ಕಳೆದು ಇಂದು ಬೆಳಗಿನ ಜಾವ ಕಳುಹಿಸಿಕೊಟ್ಟಿದ್ದರು.
ಅಂಬಿಕಾ ಅವರ ಪತಿ ಯೆಲ್ಲಯ್ಯ ಅವರು ತನ್ನ ಹೆಣ್ಣುಮಕ್ಕಳನ್ನು ಸ್ಥಳೀಯ ರೈಲಿನಲ್ಲಿ ಕಳುಹಿಸಲು ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದರು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಹೀಗಾಗಿ ರೈಲು ತಪ್ಪಿತು. ನಂತರ ಅವರು ತನ್ನ ಹೆಣ್ಣುಮಕ್ಕಳನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ದು ದುರಂತಕ್ಕೀಡಾದ ಬಸ್ ಹತ್ತಿಸಿದ್ದರು.
ತಂದೆ ಬಸ್ ಹತ್ತಿಸಿ ಮನೆಗೆ ತೆರಳಿದ ಸ್ವಲ್ಪ ಸಮಯದಲ್ಲಿಯೇ ಹೆತ್ತವರಿಗೆ ತಮ್ಮ ಹೆಣ್ಣುಮಕ್ಕಳ ಸಾವಿನ ಸುದ್ದಿ ಬಂದಿತು. ಮೂವರು ಸಹೋದರಿಯರು ಜೀವನದಲ್ಲಿ ಮತ್ತು ಸಾವಿನಲ್ಲೂ ಒಂದಾಗಿದ್ದಾರೆ.
ರಂಗಾರೆಡ್ಡಿ ಜಿಲ್ಲೆಯ ಗಾಂಧಿನಗರದ ವಡ್ಡರಗಲ್ಲಿಯ ಈ ಸಹೋದರಿಯರು ಹೈದರಾಬಾದ್‌ನಲ್ಲಿ ಓದುತ್ತಿದ್ದರು. ತನುಷಾ ಎಂಬಿಎ ಓದುತ್ತಿದ್ದರೆ, ಸಾಯಿ ಪ್ರಿಯಾ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿದ್ದರು ಮತ್ತು ನಂದಿನಿ ಪದವಿ ಕೋರ್ಸ್‌ನ ಮೊದಲ ವರ್ಷದಲ್ಲಿದ್ದರು. ಅವರ ಹಿರಿಯ ಸಹೋದರಿ ಅನುಷಾ ಕೇವಲ 20 ದಿನಗಳ ಹಿಂದೆ, ಅಕ್ಟೋಬರ್ 17 ರಂದು ವಿವಾಹವಾಗಿದ್ದರು. ಈ ದುರಂತವು ಕುಟುಂಬವನ್ನು ತೀವ್ರ ದುಃಖಕ್ಕೆ ದೂಡಿದೆ.
ಅದೇ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಮತ್ತೊಬ್ಬ ಪ್ರಯಾಣಿಕ ಅಖಿಲಾ ರೆಡ್ಡಿಯ ತಾಯಿ, ರಸ್ತೆ ಪ್ರಯಾಣದ ಬಗ್ಗೆ ತಾನು ಯಾವಾಗಲೂ ಭಯಪಡುತ್ತಿದ್ದೆ ಎಂದು ನೆನಪಿಸಿಕೊಂಡರು ಮತ್ತು ಈಗ ಅವರ ಭಯ ನಿಜವಾಗಿದೆ.
"ನನ್ನ ಮಗಳು ರಸ್ತೆಯಲ್ಲೇ ತನ್ನ ಪ್ರಾಣ ಕಳೆದುಕೊಂಡಳು" ಎಂದು ತಾಯಿ ಕಣ್ಣೀರಿಟ್ಟಿದ್ದಾರೆ. ಅಖಿಲಾ ರೆಡ್ಡಿ ಯಲಾಲ್ ಮಂಡಲದ ಲಕ್ಷ್ಮಿನಾರಾಯಣ ಪುರ್ ಗ್ರಾಮದವಾರಿದ್ದು, ಅವರು ಹೈದರಾಬಾದ್‌ನಲ್ಲಿ ಎಂಬಿಎ ಓದುತ್ತಿದ್ದರು.
ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 24 ಜನ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.