ಬಿಲಾಸ್ಪುರ: ಛತ್ತೀಸ್‌ಗಢದ ಬಿಲಾಸ್ಪುರ ರೈಲು ನಿಲ್ದಾಣದ ಬಳಿ ಪ್ಯಾಸೆಂಜರ್ ರೈಲು ಮತ್ತು ಸರಕು ರೈಲು ಡಿಕ್ಕಿ ಹೊಡೆದು ಮೃತಪಟ್ಟವರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನಿನ್ನೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ MEMU (ಮುಖ್ಯ ವಿದ್ಯುತ್ ಮಲ್ಟಿಪಲ್ ಯೂನಿಟ್) ಪ್ಯಾಸೆಂಜರ್ ರೈಲು ಗೆವ್ರಾದಿಂದ (ನೆರೆಯ ಕೊರ್ಬಾ ಜಿಲ್ಲೆಯ) ಬಿಲಾಸ್ಪುರಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 20 ಜನರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ರೈಲ್ವೆ ಆಡಳಿತವು ತಕ್ಷಣ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಪ್ಯಾಸೆಂಜರ್ ರೈಲಿನ ಒಂದು ಬೋಗಿ ಸರಕು ರೈಲಿನ ವ್ಯಾಗನ್ ಮೇಲೆ ಬಿದ್ದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳು ಪ್ರಯಾಣಿಕರನ್ನು ಬಿಲಾಸ್ಪುರದ ಅಪೋಲೋ ಆಸ್ಪತ್ರೆ ಮತ್ತು ಛತ್ತೀಸ್‌ಗಢ ವೈದ್ಯಕೀಯ ವಿಜ್ಞಾನ ಸಂಸ್ಥೆ (CIMS) ಗೆ ಸ್ಥಳಾಂತರಿಸಲಾಗಿದೆ.
ರೆಡ್ ಸಿಗ್ನಲ್ ನ್ನು ಮೀರಿದ ನಂತರ ಪ್ಯಾಸೆಂಜರ್ ರೈಲು 60 ರಿಂದ 70 ಕಿ.ಮೀ ವೇಗದಲ್ಲಿ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೂಡ್ಸ್ ರೈಲು ಗೋಚರ ದೂರದಲ್ಲಿದ್ದರೂ, ಲೋಕೋ ಪೈಲಟ್ ಕೆಂಪು ಸಿಗ್ನಲ್ ನ್ನು ಹಾರಿಸಿ ತುರ್ತು ಬ್ರೇಕ್ ನ್ನು ಸಮಯಕ್ಕೆ ಸರಿಯಾಗಿ ಏಕೆ ಹಾಕಲಿಲ್ಲ ಎಂಬುದು ಈಗ ತನಿಖೆಯ ವಿಷಯವಾಗಿದೆ ಎಂದು ಅಧಿಕಾರಿ ಹೇಳಿದರು.
ಪ್ಯಾಸೆಂಜರ್ ರೈಲಿನ ಲೋಕೋ ಪೈಲಟ್ ವಿದ್ಯಾ ಸಾಗರ್ ಅಪಘಾತದಲ್ಲಿ ಮೃತಪಟ್ಟವರಲ್ಲಿ ಒಬ್ಬರು. ಸಹಾಯಕ ಲೋಕೋ ಪೈಲಟ್ ರಶ್ಮಿ ರಾಜ್ ಗಂಭೀರ ಗಾಯಗೊಂಡರು. ಪ್ಯಾಸೆಂಜರ್ ರೈಲು ಬ್ರೇಕ್ ವ್ಯಾನ್‌ಗೆ ಎಷ್ಟು ಬಲವಾಗಿ ಡಿಕ್ಕಿ ಹೊಡೆದು ಅದು ತೀವ್ರವಾಗಿ ನಜ್ಜುಗುಜ್ಜಾಯಿತು ಎಂದು ಅಧಿಕಾರಿ ಹೇಳಿದರು.
ಗೂಡ್ಸ್ ರೈಲಿನ ವ್ಯವಸ್ಥಾಪಕ (ಗಾರ್ಡ್) ಕೊನೆಯ ಕ್ಷಣದಲ್ಲಿ ಬ್ರೇಕ್ ವ್ಯಾನ್ - ಗೂಡ್ಸ್ ರೈಲಿನ ಕೊನೆಯ ಕೋಚ್ - ನಿಂದ ಹೊರಗೆ ಹಾರಿದರು. ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಗಾಯಗೊಂಡ ರೈಲ್ವೆ ಸಿಬ್ಬಂದಿ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರು ಹೇಳಿದರು.
ಪರಿಹಾರ ಪ್ರಕಟ
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 5 ಲಕ್ಷ ರೂ. ಪರಿಹಾರವನ್ನು ರೈಲ್ವೆ ಅಧಿಕಾರಿಗಳು ಘೋಷಿಸಿದ್ದಾರೆ, ಆದರೆ ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂ. ನೆರವು ನೀಡಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಘಟನೆಯ ಬಗ್ಗೆ ವಿವರವಾದ ತನಿಖೆಯನ್ನು ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ಮಟ್ಟದಲ್ಲಿ ನಡೆಸಲಾಗುವುದು, ಕಾರಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯ ಸರಿಪಡಿಸುವ ಕ್ರಮಗಳನ್ನು ಶಿಫಾರಸು ಮಾಡಲಾಗುವುದು ಎಂದು ಅದು ತಿಳಿಸಿದೆ.
ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ.