ಇಟಾನಗರ: ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಸೈನಿಕ್ ಶಾಲೆಯ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 12 ವರ್ಷದ ವಿದ್ಯಾರ್ಥಿಯ ಆತ್ಮಹತ್ಯೆ ಬಗ್ಗೆ ಹೊಸ ಆರೋಪಗಳು ಕೇಳಿಬಂದಿವೆ.
ಹಿರಿಯ ವಿದ್ಯಾರ್ಥಿಗಳು ಬಾಲಕನಿಗೆ ತೀವ್ರ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮೃತನ ಸಹೋದರಿ ಆರೋಪಿಸಿದ್ದಾಳೆ. ನವೆಂಬರ್ 1 ರಂದು ನಿಗ್ಲೋಕ್‌ನಲ್ಲಿರುವ ಶಾಲಾ ಆವರಣದಲ್ಲಿ ಬಾಲಕ ಮೃತಪಟ್ಟಿರುವುದು ಪತ್ತೆಯಾಗಿದೆ.
ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಬಾಲಕನ ಸಹೋದರಿ, ಮಿಸ್ ಅರುಣಾಚಲ 2024, ತಡು ಲುನಿಯಾ, ತನ್ನ ಸಹೋದರ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾನೆ ಎಂದು ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ವಸತಿ ನಿಲಯದ ಸಹಪಾಠಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ,
ಲೂನಿಯಾ ಪ್ರಕಾರ, ಅಕ್ಟೋಬರ್ 31 ರಂದು ರಾತ್ರಿ, ಹಾಸ್ಟೆಲ್ ನಲ್ಲಿ ಯಾವುದೇ ಮೇಲ್ವಿಚಾರಕರು ಇರಲಿಲ್ಲ, 10 ನೇ ತರಗತಿಯ ಎಂಟು ವಿದ್ಯಾರ್ಥಿಗಳು ಮತ್ತು 8 ನೇ ತರಗತಿಯ ಮೂವರು ವಿದ್ಯಾರ್ಥಿಗಳ ಗುಂಪು ರಾತ್ರಿ 11 ಗಂಟೆಯ ನಂತರ 7 ನೇ ತರಗತಿಯ ವಸತಿ ನಿಲಯಕ್ಕೆ ಪ್ರವೇಶಿಸಿತ್ತು ಎಂಬುದು ಕೆಡೆಟ್ ಗಳಿಂದ ತಿಳಿದು ಬಂದಿದೆ.
ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳು ಸೇರಿ ತನ್ನ ಸಹೋದರನನ್ನು ಒಂಟಿಯಾಗಿ 10 ನೇ ತರಗತಿಯ ವಿದ್ಯಾರ್ಥಿನಿಲಯಕ್ಕೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ. ಮುಚ್ಚಿದ ಬಾಗಿಲಿನ ಹಿಂದೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ ಎಂದು ಲೂನಿಯಾ ತಿಳಿಸಿದ್ದಾರೆ. ರಾತ್ರಿಯಿಡೀ ಸಹೋದರನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಕುಟುಂಬಕ್ಕೆ ತಿಳಿಸಿದ್ದಾರೆ. ಪುಸ್ತಕ ಕಾಣೆಯಾಗಿದ್ದಕ್ಕೆ ಆತನಿಗೆ "ಕಳ್ಳ" ಎಂದು ಹಣೆಪಟ್ಟಿ ಕಟ್ಟಲಾಗಿದೆ. ವೀಡಿಯೊ ರೆಕಾರ್ಡಿಂಗ್ ಮೂಲಕ ಸಭೆಯ ಸಮಯದಲ್ಲಿ ಸಾರ್ವಜನಿಕವಾಗಿ ಅವಮಾನಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತನಿಖಾಧಿಕಾರಿ ಪರಿಶೀಲಿಸಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ತನ್ನ ಸಹೋದರ ಬೆಳಿಗ್ಗೆ 5.45 ರ ಸುಮಾರಿಗೆ ವಸತಿ ನಿಲಯದ ಸುತ್ತಲೂ ಆತಂಕದಿಂದ ಓಡಾಡುತ್ತಿರುವುದನ್ನ ಹಾಗೂ ಡೆತ್ ನೋಟ್ ಬರೆಯಲು ತರಗತಿಗೆ ಪ್ರವೇಶಿಸುವುದು ಕಾಣಸಿದೆ ಎಂದು ಲೂನಿಯಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿರಿಯರು ನನ್ನನ್ನು ತುಂಬಾ ಹಿಂಸಿಸಿದರು, ನಾನು ಈಗ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ ಎಂದು ಆತ ತನ್ನ ಕೊನೆಯ ಸಂದೇಶದಲ್ಲಿ ತಿಳಿಸಿದ್ದಾನೆ ಎಂದು ದೂರಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ವಿಳಂಬವಾಗುತ್ತಿರುವ ಬಗ್ಗೆ ಮತ್ತು ತನಿಖೆಯಲ್ಲಿ ನಿಧಾನಗತಿಯ ಪ್ರಗತಿಯ ಬಗ್ಗೆ ಆಕೆ ಕಳವಳ ವ್ಯಕ್ತಪಡಿಸಿದ್ದಾರೆ.