ಪುಣೆ: ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP)ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪವಾರ್ ಗೆ ಸೇರಿದ ಕಂಪನಿ ಭಾಗಿಯಾಗಿದೆ ಎನ್ನಲಾದ ಪುಣೆ ಅಕ್ರಮ ಭೂ ವ್ಯವಹಾರ ಆರೋಪದ ತನಿಖೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ತನಿಖಾ ಸಮಿತಿಯನ್ನು ರಚಿಸಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ವಿಕಾಸ್ ಖರ್ಗೆ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೂ. 1,800 ಕೋಟಿ ರೂ. ಮೌಲ್ಯದ ಭೂಮಿಯನ್ನು ಪಾರ್ಥ್ ಪವಾರ್ ಅವರಿಗೆ ಸೇರಿದ ಅಮೇಡಿಯಾ ಎಂಟರ್‌ಪ್ರೈಸಸ್ ಕಂಪನಿಗೆ ರೂ. 300 ಕೋಟಿ ಗೆ ಮಾರಾಟ ಮಾಡಲಾಗಿದೆ ಎಂದು ವಿರೋಧ ಪಕ್ಷ ಆರೋಪಿಸಿದ ನಂತರ, ರಾಜ್ಯ ಸರ್ಕಾರ ಪ್ರಕರಣದಲ್ಲಿ ತಹಶೀಲ್ದಾರ್ ಮತ್ತು ಸಬ್-ರಿಜಿಸ್ಟ್ರಾರ್ ಅವರನ್ನು ಅಮಾನತುಗೊಳಿಸಿದೆ.
ಈ ಭೂ ವ್ಯವಹಾರವನ್ನು "ಪ್ರಾಥಮಿಕವಾಗಿ ಗಂಭೀರ" ಎಂದು ಫಡ್ನವೀಸ್ ಕರೆದಿದ್ದಾರೆ. ಆದರೆ ಅಜಿತ್ ಪವಾರ್ ಈ ಡೀಲ್ ನಲ್ಲಿ ಯಾವುದೇ ಸಂಬಂಧವನ್ನು ನಿರಾಕರಿಸಿದ್ದಾರೆ. ಪಾರ್ಥ್ ಪವಾರ್ ಇನ್ನೂ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ. ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಪ್ರಕರಣದ ಎಲ್ಲಾ ಮಾಹಿತಿಯನ್ನು ಸಂಬಂಧಿತ ಇಲಾಖೆಗಳಿಂದ ಕೇಳಿದ್ದೇನೆ. ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಪವಾರ್, ಖಂಡಿತವಾಗಿಯೂ ಮುಖ್ಯಮಂತ್ರಿ ಇದನ್ನು ತನಿಖೆ ನಡೆಸಬೇಕು. ಇದು ಅವರ ಹಕ್ಕು. ಈ ಭೂ ವ್ಯವಹಾರದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ.
ಅಂತಹ ಕೆಲವು ವಿಷಯಗಳು ನಡೆಯುತ್ತಿವೆ ಎಂದು ಮೂರ್ನಾಲ್ಕು ತಿಂಗಳ ಹಿಂದೆ ನಾನು ಕೇಳಿದ್ದೆ. ಅಂತಹ ಯಾವುದೇ ತಪ್ಪನ್ನು ನಾನು ಸಹಿಸುವುದಿಲ್ಲ ಎಂದು ನಾನು ಆಗಲೇ ಸ್ಪಷ್ಟವಾಗಿ ಹೇಳಿದ್ದೆ. ಯಾರೂ ಅಂತಹ ತಪ್ಪು ಕೆಲಸಗಳನ್ನು ಮಾಡಬಾರದು ಎಂದು ಸ್ಪಷ್ಟ ಸೂಚನೆಗಳನ್ನು ನೀಡಿದ್ದೆ. ಅದರ ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದರು.
ತಮ್ಮ ಸಂಬಂಧಿಕರಿಗೆ ಪ್ರಯೋಜನವಾಗುವಂತೆ ಯಾವುದೇ ಅಧಿಕಾರಿಗೆ ಕರೆ ಮಾಡಿಲ್ಲ ಅಥವಾ ಸೂಚನೆ ನೀಡಿಲ್ಲ. ತಮ್ಮ ಕೆಲಸಕ್ಕಾಗಿ ನನ್ನ ಹೆಸರನ್ನು ಹೇಳುವ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಪವಾಗಿ ಹೇಳಿದ್ದೇನೆ. ನಿಮ್ಮ ಮಕ್ಕಳು ಬೆಳೆದಾಗ ಅವರ ಸ್ವಂತ ವ್ಯವಹಾರಗಳನ್ನು ಮಾಡುತ್ತಾರೆ ಎಂದು ಅವರು ತಿಳಿಸಿದರು.
ಪುಣೆ ಭೂ ವ್ಯವಹಾರ ವಿಷಯನ್ನಿಟ್ಟುಕೊಂಡು ಬಿಜೆಪಿ, ಅಜಿತ್ ಪವಾರ್ ಅವರ ಎನ್‌ಸಿಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಒಳಗೊಂಡ ಮಹಾಯುತಿ ಆಡಳಿತವನ್ನು ವಿರೋಧ ಪಕ್ಷಗಳು ಟೀಕಿಸುತ್ತಿದ್ದಂತೆಯೇ ಪುಣೆಯ ತಹಶೀಲ್ದಾರ್ ಸೂರ್ಯಕಾಂತ್ ಯೆವಾಲೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.