ನವದೆಹಲಿ: ನಿಮಗೆ ನೀವೇ ಹೊರೆ ಹೊತ್ತುಕೊಳ್ಳಬೇಡಿ.. ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ನಿಮ್ಮ ಮಗ ಕಾರಣ ಎಂದು ಭಾರತದಲ್ಲಿ ಯಾರೂ ನಂಬುವುದಿಲ್ಲ ಎಂದು ಪೈಲಟ್ ತಂದೆಗೆ ಸುಪ್ರೀಂಕೋರ್ಟ್ ಸಾಂತ್ವನ ಹೇಳಿದೆ.
ಜೂನ್ 12 ರಂದು, ಏರ್ ಇಂಡಿಯಾದ AI-171 ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಕೆಲವು ಸೆಕೆಂಡುಗಳ ನಂತರ, ಅದು ಹತ್ತಿರದ ವೈದ್ಯಕೀಯ ಕಾಲೇಜಿನ ಮೇಲೆ ಅಪ್ಪಳಿಸಿತು. ಒಬ್ಬ ಪ್ರಯಾಣಿಕ ಮತ್ತು ಹಲವಾರು ವೈದ್ಯಕೀಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ 260 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಈ ದುರ್ಘಟನೆಗೆ ಪೈಲಟ್ ಅಚಾತುರ್ಯವೇ ಕಾರಣ ಎಂಬ ಆರೋಪಿಗಳು ಕೇಳಿಬಂದಿದ್ದವು. ಇದೇ ವಿಚಾರವಾಗಿ ಇಂದು ನಡೆದ ವಿಚಾರಣೆಯಲ್ಲಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, 'ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ನಿಮ್ಮ ಮಗ ಕಾರಣ ಎಂದು ಭಾರತದಲ್ಲಿ ಯಾರೂ ನಂಬುವುದಿಲ್ಲ ಎಂದು ಪೈಲಟ್ ತಂದೆಗೆ ಸಾಂತ್ವನ ಹೇಳಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ಇದು ಅವರ ಮಗನ ತಪ್ಪು ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಅವರಿಗೆ ಭರವಸೆ ನೀಡಿತು. ಅಪಘಾತಕ್ಕೆ ವಿಮಾನದಲ್ಲಿ ಇಂಧನ ಸ್ಥಗಿತಗೊಂಡಿದ್ದೇ ಕಾರಣ ಎಂಬುದು ತಿಳಿದುಬಂದಿದೆ, ಪೈಲಟ್ ಎಲ್ಲಾದರೂ ಇಂಧನ ಸ್ಥಗಿತಗೊಳಿಸುತ್ತಾರಾ ಎಂದು ನ್ಯಾಯಮೂರ್ತಿಗಳು ಕೇಳಿದ್ದಾರೆ.
ನಿಮಗೆ ನೀವೇ ಹೊರೆ ಹೊತ್ತುಕೊಳ್ಳಬೇಡಿ
ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲಟ್‌ನ ತಂದೆ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಅವರಿಂದ ಉತ್ತರ ಕೇಳಿದ್ದು, ಅಪಘಾತದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಸೂಚಿಸಿದೆ.
ಕಮಾಂಡರ್ ಸುಮೀತ್ ಸಭರ್ವಾಲ್ ಅವರ 91 ವರ್ಷದ ತಂದೆ ಬಳಿ ನ್ಯಾಯಮೂರ್ತಿಗಳು ಮಾತನಾಡಿ, ನೀವು ಕೊಲೆಗಾರನೆಂಬ ಈ ಹೊರೆಯನ್ನು ಹೊತ್ತುಕೊಳ್ಳುವುದು ಬೇಡ ಎಂದು ಹೇಳಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ ( ಎಎಐಬಿ ) ಯ ಪ್ರಾಥಮಿಕ ವರದಿಯು ಪೈಲಟ್ ತಪ್ಪಿದೆ ಎಂದು ಹೇಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಕೀಲರ ವಾದ
ಪೈಲಟ್ ವಕೀಲರು ತಮ್ಮ ವಾದ ಮಂಡಿಸುತ್ತಾ, 'ವಿದೇಶಿ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್' ಒಂದು ಲೇಖನ ಪ್ರಕಟಿಸಿತ್ತು. ಲೇಖನದಲ್ಲಿ ದುರಂತಕ್ಕೆ ಪೈಲಟ್ ಕಾರಣ ಎನ್ನುವ ಅರ್ಥದಲ್ಲಿ ಬರೆಯಲಾಗಿತ್ತು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿಗಳು, "ವಿದೇಶಿ ವರದಿಗಳಿಂದ ನಮಗೆ ತೊಂದರೆಯಾಗುವುದಿಲ್ಲ. ಹಾಗಾದರೆ ನಿಮ್ಮ ಪರಿಹಾರವು ವಿದೇಶಿ ನ್ಯಾಯಾಲಯದ ಮುಂದೆ ಇರಬೇಕೇ? ಇದು ಕೇವಲ ಅಸಹ್ಯಕರ ವರದಿಯಾಗಿದೆ" ಎಂದು ನ್ಯಾಯಮೂರ್ತಿ ಕಾಂತ್ ಉತ್ತರಿಸಿದರು.
"ಅವರು ಭಾರತ ಸರ್ಕಾರದ ಮೂಲವನ್ನು ಉಲ್ಲೇಖಿಸಿರುವುದರಿಂದ ನನಗೆ ಕಳವಳವಾಗಿದೆ" ಎಂದು ವಕೀಲರು ಹೇಳಿದರು.
ತನಿಖೆ ಮುಕ್ತಾಯಕ್ಕೆ ಒತ್ತಾಯ
ಇನ್ನು ಭಾರತೀಯ ಪೈಲಟ್‌ಗಳ ಒಕ್ಕೂಟದ ಬೆಂಬಲದೊಂದಿಗೆ ಸಲ್ಲಿಸಲಾದ ಈ ಅರ್ಜಿಯು, ನಡೆಯುತ್ತಿರುವ AAIB ತನಿಖೆಯನ್ನು ಮುಕ್ತಾಯಗೊಳಿಸಬೇಕು ಮತ್ತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಾಯುಯಾನ ತಜ್ಞರ ಸ್ವತಂತ್ರ ಸಮಿತಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಲಾಗಿದೆ.