ತಿರುವನಂತಪುರಂ: ಕೇರಳದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದ್ದು, ಪ್ರಯಾಣಿಕ ಬಸ್ ನಲ್ಲಿ ದೂರ್ತನೋರ್ವ ಯುವತಿಯೊಬ್ಬಳ ಟೀ ಶರ್ಟ್ ನೊಳಗೆ ಕೈಹಾಕಿದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದ್ದು, ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಸಂತ್ರಸ್ಥೆಯೇ ಈ ವಿಡಿಯೋ ಸೆರೆ ಹಿಡಿದು ಆರೋಪಿಯನ್ನು ಬಸ್ ನಲ್ಲೇ ಥಳಿಸಿದ್ದಾರೆ.
ತಿರುವನಂತಪುರಂನಿಂದ ವೆಲ್ಲರದಕ್ಕೆ ಪ್ರಯಾಣಿಸುತ್ತಿದ್ದ ಕೇರಳ ಸಾರಿಗೆ ಬಸ್‌ನಲ್ಲಿ ಈ ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದೆ. ಪ್ರಯಾಣದ ಸಮಯದಲ್ಲಿ ಆ ವ್ಯಕ್ತಿ ತನ್ನ ಕೈಯನ್ನು ತನ್ನ ಟೀ ಶರ್ಟ್ ನೊಳಗೆ ಹಾಕಲು ಪ್ರಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಮೊದಲು ತನ್ನ ಪಕ್ಕದಲ್ಲಿ ಕುಳಿತ ವ್ಯಕ್ತಿ ತನ್ನ ದೇಹವನ್ನು ನನ್ನ ದೇಹಕ್ಕೆ ಗಟ್ಟಿಯಾಗಿ ಒತ್ತಿದ. ಆದರೆ ಆರಂಭದಲ್ಲಿ ನಾನು ಇದನ್ನು ನಿರ್ಲಕ್ಷಿಸಿದೆ. ಆದರೆ ಬಳಿಕ ಆತನ ವರ್ತನೆ ಗಂಭೀರವಾಯಿತು. ಹೀಗಾಗಿ ನಾನು ನನ್ನ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿದೆ. ಈ ವೇಳೆ ನೋಡ ನೋಡುತ್ತಲೇ ಆತ ನನ್ನ ಪ್ಯಾಂಟ್ ಮೇಲೆ ಕೈಹಾಕಿ ಬಳಿಕ ನನ್ನ ಟೀಶರ್ಟ್ ನೊಳಗೂ ಕೈ ಹಾಕಿದ. ಇದರಿಂದ ನಾನು ಸಂಯಮ ಕಳೆದುಕೊಂಡು ಆತನಿಗೆ ಕಪಾಳ ಮೋಕ್ಷ ಮಾಡಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ.
ಬಸ್ ನಲ್ಲೇ ಧರ್ಮದೇಟು
ಇನ್ನು ಆತನ ಕೃತ್ಯವನ್ನು ಖಂಡಿಸಿದ ಯುವತಿ, ಆತನ ಕಾಪಳಕ್ಕೆ ಹೊಡೆದು.. "ನಿಮಗೆ ಮನೆಯಲ್ಲಿ ತಾಯಿ ಅಥವಾ ಸಹೋದರಿಯರು ಇಲ್ಲವೇ? ಸುತ್ತಲೂ ತುಂಬಾ ಜನರಿರುವ ಬಸ್‌ನಲ್ಲಿ ನೀವು ಹೇಗೆ ಹೀಗೆ ವರ್ತಿಸಬಹುದು? ನಿಮಗೆ ನಾಚಿಕೆಯಾಗುವುದಿಲ್ಲವೇ?" ಎಂದು ಕೇಳಿದ್ದಾಳೆ. ಯುವತಿ ತಿರುಗಿಬಿದ್ದ ಕೂಡಲೇ ಆತ ಅಲ್ಲಿಂದ ಎದ್ದು ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಯುವತಿಯ ಗದ್ದಲ ಕೇಳಿದ ಬಸ್ ಕಂಡಕ್ಟರ್ ಮಧ್ಯಪ್ರವೇಶಿಸಿ ತಿಳಿಹೇಳಿದ್ದಾರೆ. ಅಲ್ಲದೆ ಆರೋಪಿಗೆ ಬೈದು ಕೂಡಲೇ ಆತನನ್ನು ಬಸ್ ನಿಂದ ಕೆಳಗಿಳಿಸಿ ಕಳುಹಿಸಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ಬಸ್ ನಲ್ಲಿದ್ದ ಸಹ ಪ್ರಯಾಣಿಕರು ಮಾತ್ರ ಯಾವುದೇ ರೀತಿಯ ಆಕ್ಷೇಪ ಕೂಡ ಎತ್ತಿಲ್ಲ. ಮಾತ್ರವಲ್ಲದೆ ಸಂತ್ರಸ್ಥ ಯುವತಿ ಕೂಡ ಪೊಲೀಸ್ ದೂರು ದಾಖಲಿಸಿಲ್ಲ ಎಂದು ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.