ಕೋಲ್ಕತ್ತಾ: ಕೋಲ್ಕತ್ತಾ ಬಳಿಯ ಹೂಗ್ಲಿಯಲ್ಲಿ ಶುಕ್ರವಾರ ತಡರಾತ್ರಿ ತನ್ನ ಅಜ್ಜಿಯ ಪಕ್ಕದಲ್ಲಿ ಮಲಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳು, ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಜಾರ ಸಮುದಾಯಕ್ಕೆ ಸೇರಿದ ಸಂತ್ರಸ್ತೆಯು ಅಜ್ಜಿಯೊಂದಿಗೆ ತಾರಕೇಶ್ವರದ ರೈಲ್ವೆ ಶೆಡ್‌ನಲ್ಲಿ ಸೊಳ್ಳೆ ಪರದೆಯೊಂದಿಗೆ ಹಾಸಿಗೆ ಮೇಲೆ ಮಲಗಿದ್ದಳು ಎಂದು ಹೂಗ್ಲಿ ಗ್ರಾಮೀಣ ಪೊಲೀಸರ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದುಷ್ಕರ್ಮಿ ಸೊಳ್ಳೆ ಪರದೆಯನ್ನು ಕತ್ತರಿಸಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಮರುದಿನ ಮಧ್ಯಾಹ್ನ ತಾರಕೇಶ್ವರ ರೈಲ್ವೆ ಹೈ ಡ್ರೈನ್ ಬಳಿ ಮಗು ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು ಎಂದು ಕುಟುಂಬದವರು ಹೇಳಿದ್ದಾರೆ.
'ಆಕೆ ನನ್ನ ಜೊತೆ ಮಲಗಿದ್ದಳು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯಾರೋ ಅವಳನ್ನು ಕರೆದುಕೊಂಡು ಹೋಗಿದ್ದಾರೆ. ಅವಳನ್ನು ಯಾವಾಗ ಕರೆದುಕೊಂಡು ಹೋದರು ಅಂತ ನನಗೆ ತಿಳಿದಿಲ್ಲ. ಅವಳನ್ನು ಕರೆದುಕೊಂಡು ಹೋದವರು ಯಾರೆಂದು ನನಗೆ ತಿಳಿದಿಲ್ಲ. ಅವರು ಸೊಳ್ಳೆ ಪರದೆ ಕತ್ತರಿಸಿ ಆಕೆಯನ್ನು ಕರೆದೊಯ್ದಿದ್ದಾರೆ. ಆಕೆ ಪತ್ತೆಯಾದಾಗ ಅವಳ ಮೈಮೇಲೆ ಬಟ್ಟೆ ಇರಲಿಲ್ಲ' ಎಂದು ಅಜ್ಜಿ ಹೇಳಿದ್ದಾರೆ.
'ಅವರು ನಮ್ಮ ಮನೆಗಳನ್ನು ಕೆಡವಿದ್ದರಿಂದ ನಾವು ಬೀದಿಗಳಲ್ಲಿ ವಾಸಿಸುತ್ತಿದ್ದೇವೆ. ನಾವು ಎಲ್ಲಿಗೆ ಹೋಗಬೇಕು? ನಮಗೆ ಮನೆಗಳಿಲ್ಲ' ಎಂದು ಕಣ್ಣೀರಾಕಿದರು.
ಗಂಭೀರ ಸ್ಥಿತಿಯಲ್ಲಿರುವ ಸಂತ್ರಸ್ತೆಗೆ ಮೊದಲಿಗೆ ತಾರಕೇಶ್ವರ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಚಂದನ್ನನಗರ ಉಪ-ವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
'ತಾರಕೇಶ್ವರದಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಕುಟುಂಬವು ಪೊಲೀಸ್ ಠಾಣೆಗೆ ಧಾವಿಸಿದೆ. ಆದರೆ, ಎಫ್‌ಐಆರ್ ದಾಖಲಿಸಿಲ್ಲ! ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಚಂದನ್ನನಗರಕ್ಕೆ ಸ್ಥಳಾಂತರಿಸಲಾಗಿದೆ. ತಾರಕೇಶ್ವರ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕುವಲ್ಲಿ ನಿರತರಾಗಿದ್ದಾರೆ. ಇದು ಮಮತಾ ಬ್ಯಾನರ್ಜಿಯವರ ಆಡಳಿತದ ನಿಜವಾದ ಮುಖ. ಒಂದು ಮಗುವಿನ ಜೀವನ ಛಿದ್ರಗೊಂಡಿದೆ. ಆದರೆ, ಪೊಲೀಸರು ಸತ್ಯವನ್ನು ನಿಗ್ರಹಿಸುವ ಮೂಲಕ ರಾಜ್ಯದ ನಕಲಿ ಕಾನೂನು ಮತ್ತು ಸುವ್ಯವಸ್ಥೆಯ ಇಮೇಜ್ ಅನ್ನು ರಕ್ಷಿಸುತ್ತಿದ್ದಾರೆ' ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.