ಗೋಲ್ಪಾರ: ಅಸ್ಸಾಂನ ಗೋಲ್ಪಾರ ಜಿಲ್ಲೆಯ ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ(376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಭಾನುವಾರ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದು, ಇದು ಸುಮಾರು 600 ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ.
ಗೋಲ್ಪಾರ ಉಪ ಆಯುಕ್ತ ಪ್ರೊದೀಪ್ ತಿಮುಂಗ್ ಅವರು ತೆರವು ಕಾರ್ಯಾಚರಣೆ "ಶಾಂತಿಯುತವಾಗಿ" ಮುಂದುವರೆದಿದೆ ಮತ್ತು ಎರಡು ವಾರಗಳ ಹಿಂದೆಯೇ ನೋಟಿಸ್‌ಗಳನ್ನು ನೀಡಲಾಗಿತ್ತು. ನಿವಾಸಿಗಳಿಗೆ ಜಾಗ ಖಾಲಿ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
"1,140 ಬಿಘಾ ಭೂಮಿಯನ್ನು ಅತಿಕ್ರಮಿಸಿದ್ದ 580 ಕುಟುಂಬಗಳಿದ್ದು, ಅವರಲ್ಲಿ ಸುಮಾರು ಶೇ 70 ರಷ್ಟು ಜನ ನೋಟಿಸ್ ಸ್ವೀಕರಿಸಿದ ನಂತರ ಈಗಾಗಲೇ ಖಾಲಿ ಮಾಡಿದ್ದಾರೆ ಮತ್ತು ಉಳಿದವರು ಸ್ಥಳಾಂತರಗೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ತೆರವುಗೊಳಿಸುವಿಕೆಯನ್ನು ಕೈಗೊಳ್ಳಲು ಆಡಳಿತವು ಭದ್ರತಾ ಸಿಬ್ಬಂದಿ ಮತ್ತು ಭಾರೀ ಯಂತ್ರೋಪಕರಣಗಳ ದೊಡ್ಡ ತುಕಡಿಯನ್ನು ನಿಯೋಜಿಸಿದೆ. ಇದರಲ್ಲಿ ಜೆಸಿಬಿ ಮತ್ತು ಟ್ರಾಕ್ಟರ್‌ಗಳು ಸೇರಿವೆ. ಪ್ರದೇಶವನ್ನು ಐದು ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ ಮತ್ತು ಒಂದರಲ್ಲಿ ಮಾತ್ರ ಪ್ರತಿರೋಧ ವರದಿಯಾಗಿದೆ ಎಂದು ತಿಮುಂಗ್ ಹೇಳಿದ್ದಾರೆ.
ಗುವಾಹಟಿ ಹೈಕೋರ್ಟ್‌ನ ನಿರ್ದೇಶನದ ಪ್ರಕಾರ ಈ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸ್ಥಳಾಂತರಿಸಲಾಗುತ್ತಿರುವ ಕುಟುಂಬಗಳು ಹೆಚ್ಚಾಗಿ ಬಂಗಾಳಿ ಮಾತನಾಡುವ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.