ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ 'ಮಾತೋಶ್ರೀ' ಮೇಲೆ ಡ್ರೋನ್ ಹಾರಾಟ ಕಂಡುಬಂದಿದ್ದು, ಹೈ-ಸೆಕ್ಯುರಿಟಿ ವಲಯದಲ್ಲಿ ಭದ್ರತಾ ದೋಷದ ಬಗ್ಗೆ ಶಿವಸೇನಾ-ಯುಬಿಟಿ ಕಳವಳ ವ್ಯಕ್ತಪಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಶಿವಸೇನೆ-ಯುಬಿಟಿ ಎಂಎಲ್‌ಸಿ ಅನಿಲ್ ಪರಬ್, ಪೊಲೀಸರು ಈ ವಿಷಯವನ್ನು ತನಿಖೆ ಮಾಡಬೇಕು, ಡ್ರೋನ್ ಹಾರಾಟದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಇದರ ಹಿಂದೆ ಯಾವುದೇ ಭಯೋತ್ಪಾದಕ ಹಿನ್ನೆಲೆ" ಇದೆಯೇ? ಎಂಬುದರ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ 'ಮಾತೋಶ್ರೀ' ಭಾರೀ ಭದ್ರತೆಯ ನಿವಾಸವಾಗಿದೆ. ಪೂರ್ವಾನುಮತಿ ಇಲ್ಲದೆ ಇಂತಹ ಸೂಕ್ಷ್ಮ, ಹೈ-ಸೆಕ್ಯುರಿಟಿ ಪ್ರದೇಶದಲ್ಲಿ ಡ್ರೋನ್ ಹಾರಿಸುವುದು ಅಥವಾ ಅದರೊಂದಿಗೆ ಚಿತ್ರೀಕರಣ ಮಾಡುವುದು ಗಂಭೀರ ವಿಷಯವಾಗಿದೆ ಎಂದು ಪರಬ್ ಹೇಳಿದ್ದಾರೆ.
"ಮಾತೋಶ್ರೀ' ಮೇಲೆ ಡ್ರೋನ್ ಹಾರಾಟ ಕಂಡುಬಂದಿದೆ. ಇದು ಹೈ-ಸೆಕ್ಯುರಿಟಿ ವಲಯದಲ್ಲಿ ಸಂಭಾವ್ಯ ದೋಷದ ಬಗ್ಗೆ ಕಳವಳವನ್ನುಂಟು ಮಾಡುತ್ತದೆ. ಇದರ ಹಿಂದಿನ ಉದ್ದೇಶ ಕಂಡುಹಿಡಿಯಲು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುಮತಿಯೊಂದಿಗೆ ಹತ್ತಿರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ನಡೆಸಲಾಗುತ್ತಿರುವ ಸಮೀಕ್ಷೆಯ ಭಾಗವಾಗಿ ಡ್ರೋನ್ ಹಾರಾಟ ನಡೆಸಲಾಗಿದೆ."ದಯವಿಟ್ಟು ತಪ್ಪು ಮಾಹಿತಿಯನ್ನು ನೀಡಬೇಡಿ ಎಂದು ಉಪ ಪೊಲೀಸ್ ಆಯುಕ್ತ (ವಲಯ 8) ಮನೀಶ್ ಕಲ್ವಾನಿಯಾ ಸ್ಪಷ್ಪನೆ ನೀಡಿದ್ದಾರೆ.