ಆಗ್ರಾ: ಉತ್ತರ ಪ್ರದೇಶದ ಆಗ್ರಾದ ಸ್ಥಳೀಯ ನ್ಯಾಯಾಲಯವು 2019 ರಲ್ಲಿ ತನ್ನ ಗಂಡನನ್ನು ಕೊಲೆ ಮಾಡಿ ಮಹಿಳೆ, ಆಕೆಯ ಪ್ರಿಯಕರ ಮತ್ತು ಆತನ ಸ್ನೇಹಿತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಪರಾಧಿ ಮಹಿಳೆಯ ಇಬ್ಬರು ಅಪ್ರಾಪ್ತ ಪುತ್ರರು ತಾಯಿಯ ವಿರುದ್ಧವೇ ಸಾಕ್ಷ್ಯ ನುಡಿದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜಯ್ ಕೆ ಲಾಲ್ ಅವರು ಶುಕ್ರವಾರ ಈ ಮಹತ್ವದ ತೀರ್ಪು ಪ್ರಕಟಿಸಿದ್ದು, ಕುಸ್ಮಾ ದೇವಿ, ಆಕೆಯ ಪ್ರಿಯಕರ ಸುನಿಲ್ ಮತ್ತು ಆತನ ಸ್ನೇಹಿತ ಧರ್ಮವೀರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಪ್ರದೀಪ್ ಶರ್ಮಾ ಅವರ ಪ್ರಕಾರ, ಈ ಮೂವರು ಅಪರಾಧಿಗಳು ಫೆಬ್ರವರಿ 14, 2019 ರಂದು ಕುಸ್ಮಾ ದೇವಿ ಪತಿ ರಾಮ್‌ವೀರ್ (32) ಅವರನ್ನು ಗುದ್ದಲಿಯಿಂದ ಕೊಲೆ ಮಾಡಿದ್ದರು.
ಸಾಕ್ಷ್ಯಗಳನ್ನು ನಾಶಮಾಡಲು, ಅವರು ತಮ್ಮ ಮನೆಯ ಹತ್ತಿರದ ಬಾವಿಯಲ್ಲಿ ಮೃತದೇಹವನ್ನು ಎಸೆದಿದ್ದರು.
ವಿಚಾರಣೆಯ ಸಮಯದಲ್ಲಿ, ರಾಮ್‌ವೀರ್ ಅವರ ಇಬ್ಬರು ಪುತ್ರರು ತಮ್ಮ ತಾಯಿ ಮತ್ತು ಇತರ ಇಬ್ಬರು ಆರೋಪಿಗಳ ವಿರುದ್ಧ ನೀಡಿದ ಸಾಕ್ಷ್ಯ ಸೇರಿದಂತೆ ಹಲವಾರು ಸಾಕ್ಷಿಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲಾಯಿತು.
ಸಾಕ್ಷ್ಯಾಧಾರಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ, ನ್ಯಾಯಾಲಯವು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.