ಮುಂಬೈ: ತಮ್ಮ ನೆರೆಹೊರೆಯ, ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ 59 ವರ್ಷದ ನಿವೃತ್ತ ಸೇನಾ ಅಧಿಕಾರಿಯನ್ನು ಸೋಮವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಕರೆದೊಯ್ದು ತಾಪಸಣೆ ನಡೆಸಿದಾಗ, ಅಲ್ಲಿ ಅವಳು ಎರಡು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ತಾನು ಗರ್ಭಿಣಿ ಎಂದು ತಿಳಿದು ಆಘಾತಕ್ಕೊಳಗಾದ ಬಾಲಕಿ ತನ್ನ ಪೋಷಕರ ಬಳಿ ಮಾಜಿ ಸೇನಾಧಿಕಾರಿ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಶನಿವಾರ ಸಂಜೆ ಪೋಷಕರು ಮುಂಬೈನ ಪೂರ್ವ ಉಪನಗರದಲ್ಲಿ ಪೊಲೀಸರನ್ನು ಸಂಪರ್ಕಿಸಿ, ಮಾಜಿ ಸೇನಾಧಿಕಾರಿ ವಿರುದ್ಧ ದೂರು ನೀಡಿದ್ದಾರೆ.
"ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದು, ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಮಾಜಿ ಸೇನಾಧಿಕಾರಿಯನ್ನು ನವೆಂಬರ್ 12 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ" ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಉತ್ತರ ಪ್ರದೇಶ ಮೂಲದ ಈ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಸೇನೆಯಿಂದ ನಿವೃತ್ತರಾಗಿದ್ದರು ಮತ್ತು ಮುಂಬೈನ ಖಾಸಗಿ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಸೆಪ್ಟೆಂಬರ್ ಮೊದಲ ವಾರ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಎರಡು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ತನ್ನ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.