ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ಸಂಜೆ ಸ್ಫೋಟಗೊಂಡ ಕಾರಿನಲ್ಲಿದ್ದ ಮೃತದೇಹಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಹೋಲಿಕೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೆಹಲಿ ಸ್ಫೋಟದ ಸ್ಥಳದಿಂದ ಸಂಗ್ರಹಿಸಲಾದ ದೇಹದ ಮಾದರಿಗಳನ್ನು ಹೋಲಿಕೆ ಮಾಡಿ ತನಿಖೆ ನಡೆಸುವಂತೆ ಮತ್ತು ಘಟನೆಯ ವಿವರಗಳನ್ನು ಆದಷ್ಟು ಬೇಗ ನೀಡುವಂತೆ ಕೇಂದ್ರ ಗೃಹ ಸಚಿವರು ಎಫ್‌ಎಸ್‌ಎಲ್‌ಗೆ ನಿರ್ದೇಶನ ನೀಡಿದ್ದಾರೆ.
ಇಂದು ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಭದ್ರತಾ ಪರಿಶೀಲನಾ ಸಭೆಯ ನಂತರ ಈ ನಿರ್ದೇಶನಗಳನ್ನು ನೀಡಲಾಗಿದೆ.
ಸಭೆಯಲ್ಲಿ ವಿಧಿವಿಜ್ಞಾನ ಸೇವೆಗಳ ನಿರ್ದೇಶಕರು ಮತ್ತು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯ ನಿರ್ದೇಶಕರು ಸೇರಿದಂತೆ ಇತರರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಉನ್ನತ ತನಿಖಾ ಸಂಸ್ಥೆಗಳು ಸ್ಫೋಟದ ತನಿಖೆ ನಡೆಸುತ್ತಿವೆ ಮತ್ತು ಘಟನೆಯ ಬಗ್ಗೆ ಆಳವಾಗಿ ಪರಿಶೀಲಿಸಲಿವೆ ಎಂದು ಅಮಿತ್ ಶಾ ಹೇಳಿದ್ದಾರೆ.
ನಿನ್ನೆ ಸಂಜೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಭಾರಿ ಸ್ಫೋಟ ಸಂಭವಿಸಿ 12 ಜನ ಸಾವನ್ನಪ್ಪಿದ್ದಾರೆ ಮತ್ತು 20 ಜನ ಗಾಯಗೊಂಡಿದ್ದಾರೆ.