ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಹಾಗೂ ರಾಷ್ಟ್ರೀಯ ಭದ್ರತಾ ಪಡೆ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು. ಸೋಮವಾರ ಸಂಜೆ 7 ಗಂಟೆಗೆ ದೆಹಲಿಯ ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗ ಸಂಚಾರ ಸಿಗ್ನಲ್‌ನಲ್ಲಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಈ ಕಾರು ಸ್ಫೋಟದಿಂದ ಕೆಲವು ಪಾದಚಾರಿಗಳು ಗಾಯಗೊಂಡಿದ್ದಾರೆ ಮತ್ತು ಕೆಲವು ವಾಹನಗಳು ಹಾನಿಗೊಳಗಾಗಿವೆ.
ಪ್ರಾಥಮಿಕ ವರದಿಗಳು ಕೆಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸೂಚಿಸುತ್ತವೆ. ಸ್ಫೋಟದ ಮಾಹಿತಿ ಬಂದ 10 ನಿಮಿಷಗಳಲ್ಲಿ, ದೆಹಲಿ ಅಪರಾಧ ವಿಭಾಗ ಮತ್ತು ದೆಹಲಿ ವಿಶೇಷ ವಿಭಾಗದ ತಂಡಗಳು ಸ್ಥಳಕ್ಕೆ ಬಂದವು" ಎಂದು ಹೇಳಿದ್ದಾರೆ.
ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳು, ಎಫ್‌ಎಸ್‌ಎಲ್ ಜೊತೆಗೆ, ಈಗ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿವೆ ಮತ್ತು ಹತ್ತಿರದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲು ಆದೇಶಿಸಲಾಗಿದೆ.
"ದೆಹಲಿ ಸಿಪಿ ಮತ್ತು ವಿಶೇಷ ಶಾಖೆಯ ಉಸ್ತುವಾರಿಯೊಂದಿಗೆ ಮಾತನಾಡಿದ್ದೇನೆ. ದೆಹಲಿ ಸಿಪಿ ಮತ್ತು ವಿಶೇಷ ಶಾಖೆಯ ಉಸ್ತುವಾರಿ ಸ್ಥಳದಲ್ಲಿದ್ದಾರೆ. ನಾವು ಎಲ್ಲಾ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದೇವೆ ಮತ್ತು ಎಲ್ಲಾ ಸಾಧ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಸಂಪೂರ್ಣ ತನಿಖೆ ನಡೆಸುತ್ತೇವೆ. ಫಲಿತಾಂಶಗಳನ್ನು ನಾವು ಸಾರ್ವಜನಿಕರ ಎದುರು ಪ್ರಸ್ತುತಪಡಿಸುತ್ತೇವೆಂದು ತಿಳಿಸಿದರು.
ಏತನ್ಮಧ್ಯೆ ಅಮಿತ್ ಶಾ ಅವರು ಲೋಕ ನಾಯಕ್ ಆಸ್ಪತ್ರೆಯಲ್ಲಿ ಸ್ಫೋಟದಲ್ಲಿ ಗಾಯಗೊಂಡ ಜನರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಇದೇ ವೇಳೆ ಅಮಿತ್ ಶಾ ಅವರು ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಮತ್ತು ಲೋಕ ನಾಯಕ್ ಆಸ್ಪತ್ರೆಯಲ್ಲಿ ವೈದ್ಯರ ತಂಡದೊಂದಿಗೆ ಸಭೆ ನಡೆಸಿದರು.
ಈ ನಡುವೆ ಪ್ರಧಾನಿ ಮೋದಿಯವರು ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಸಂತ್ರಸ್ತರಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ಇತರ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ ಕೂಡ ಸಂತಾಪ ಸೂಚಿಸಿದ್ದು, ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟದ ಸುದ್ದಿ ಅತ್ಯಂತ ಹೃದಯವಿದ್ರಾವಕ ಮತ್ತು ಕಳವಳಕಾರಿಯಾಗಿದೆ. ಈ ದುರಂತ ಘಟನೆಯಲ್ಲಿ ಹಲವಾರು ಅಮಾಯಕರ ಸಾವಿನ ವರದಿ ತೀವ್ರ ದುಃಖಕರವಾಗಿದೆ.
ಈ ದುಃಖದ ಸಮಯದಲ್ಲಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಿತ ಕುಟುಂಬಗಳೊಂದಿಗೆ ನಾನು ನಿಲ್ಲುತ್ತೇನೆ ಮತ್ತು ಅವರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರೆಲ್ಲರೂ ಬೇಗನೆ ಚೇತರಿಸಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ಕರೆದಿದ್ದು, ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.