ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಆರು ನಕ್ಸಲೀಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಹಿರಿಯ ನಕ್ಸಲೀಯರು ಇರುವ ಬಗ್ಗೆ ದೊರೆತ ಮಾಹಿತಿ ಆಧಾರದ ಮೇಲೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದಾಗ ಗುಂಡಿನ ಚಕಮಕಿ ನಡೆಯಿತು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ತಿಳಿಸಿದ್ದಾರೆ.
ಹಲವು ಗಂಟೆಗಳ ಕಾಲ ನಿರಂತರವಾಗಿ ಗುಂಡಿನ ಚಕಮಕಿ ನಡೆದಿದ್ದು, ಎನ್ ಕೌಂಟರ್ ನಡೆದ ಸ್ಥಳದಿಂದ INSAS ರೈಫಲ್, ಸ್ಟೆನ್ ಗನ್, 303 ರೈಫಲ್ ಮತ್ತು ಸ್ಫೋಟಕಗಳು ಸೇರಿದಂತೆ ಆರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
ಈ ಕಾರ್ಯಾಚರಣೆಯೊಂದಿಗೆ ಈ ವರ್ಷ ಇಲ್ಲಿಯವರೆಗೆ ಛತ್ತೀಸ್‌ಗಢದಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ 259 ನಕ್ಸಲರು ಸಾವನ್ನಪ್ಪಿದ್ದಾರೆ. ಅವರಲ್ಲಿ 230 ಜನರನ್ನು ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತರ್ ವಿಭಾಗದಲ್ಲಿ ಹತ್ಯೆ ಮಾಡಲಾಗಿದ್ದು, 27 ಜನರನ್ನು ರಾಯಪುರ ವಿಭಾಗಕ್ಕೆ ಸೇರುವ ಗರಿಯಾಬಂದ್ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದುರ್ಗ ವಿಭಾಗದ ಮೊಹ್ಲಾ-ಮನ್‌ಪುರ-ಅಂಬಾಘರ್ ಚೌಕಿ ಜಿಲ್ಲೆಯಲ್ಲಿ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ.
ಸೆಪ್ಟೆಂಬರ್ 22 ರಂದು, ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯರಾದ ರಾಜು ದಾದಾ ಅಲಿಯಾಸ್ ಕಟ್ಟಾ ರಾಮಚಂದ್ರ ರೆಡ್ಡಿ (63) ಮತ್ತು ಕೋಸಾ ದಾದಾ ಅಲಿಯಾಸ್ ಕದರಿ ಸತ್ಯನಾರಾಯಣ ರೆಡ್ಡಿ (67) ಎಂಬ ಇಬ್ಬರು ಹಿರಿಯ ನಕ್ಸಲರು ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದರು.