ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿರುವ ಭಾರತೀಯ ಜನತಾ ಪಕ್ಷ, ಶುಕ್ರವಾರದ ಫಲಿತಾಂಶಕ್ಕೂ ಮುಂಚಿತವಾಗಿ 501 ಕೆಜಿ ಲಡ್ಡನ್ನು ಆರ್ಡರ್ ಮಾಡಿದೆ.
ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ, ನವೆಂಬರ್ 6 ಮತ್ತು 11 ರಂದು ಮತದಾನ ನಡೆದಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.
1951 ರಿಂದೀಚೆಗೆ ಬಿಹಾರ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ ಶೇ. 66.91 ರಷ್ಟು ಮತದಾನವನ್ನು ದಾಖಲಿಸಿದೆ. ಬಹುತೇಕ ಎಕ್ಸಿಟ್ ಪೋಲ್ ಗಳು ಎನ್‌ಡಿಎ ಸರ್ಕಾರಕ್ಕೆ ಸ್ಪಷ್ಟ ಜನಾದೇಶವನ್ನು ಸೂಚಿಸಿದ್ದು, ಇದರಿಂದ ಉತ್ತೇಜಿತವಾಗಿರುವ ಕೇಸರಿ ಪಕ್ಷವು ಈಗಾಗಲೇ ಸಂಭ್ರಮಾಚರಣೆಯ ಮನಸ್ಥಿತಿಯಲ್ಲಿದೆ.
"ಮತ ಎಣಿಕೆಯ ದಿನದಂದು, ಎನ್‌ಡಿಎ ಹೋಳಿ, ದಸರಾ, ದೀಪಾವಳಿ ಮತ್ತು ಈದ್ ಅನ್ನು ಆಚರಿಸುತ್ತದೆ. ಏಕೆಂದರೆ ಬಿಹಾರ ಜನ ಎನ್‌ಡಿಎನ ಅಭಿವೃದ್ಧಿ ಕಾರ್ಯಗಳ ಪರವಾಗಿ ಮತ ಚಲಾಯಿಸಿದ್ದಾರೆ" ಎಂದು ಬಿಜೆಪಿ ಕಾರ್ಯಕರ್ತ ಕೃಷ್ಣ ಕುಮಾರ್ ಕಲ್ಲು ಅವರು ಪಿಟಿಐಗೆ ತಿಳಿಸಿದ್ದಾರೆ.
ಫಲಿತಾಂಶದ ದಿನ ಜನರಿಗೆ "ಪ್ರಸಾದವಾಗಿ ವಿತರಿಸಲು" ನಮ್ಮ ಪಕ್ಷವು 501 ಕೆಜಿ ಲಡ್ಡನ್ನು ಆರ್ಡರ್ ಮಾಡಿದೆ ಎಂದು ಅವರು ಹೇಳಿದ್ದಾರೆ.
ಪಾಟ್ನಾದ ಲಡ್ಡು ತಯಾರಕರೊಬ್ಬರು ಬಿಜೆಪಿ ಕಾರ್ಯಕರ್ತರು 501 ಕೆಜಿ ಸಾಂಪ್ರದಾಯಿಕ ಸಿಹಿತಿಂಡಿಯನ್ನು ಆರ್ಡರ್ ಮಾಡಿದ್ದಾರೆ ಎಂದು ದೃಢಪಡಿಸಿದ್ದು, ಇದನ್ನು ನವೆಂಬರ್ 14 ರ ಬೆಳಗ್ಗೆ ಅವರಿಗೆ ತಲುಪಿಸಲಾಗುವುದು ಎಂದಿದ್ದಾರೆ.