ಹೈದರಾಬಾದ್: ಮಾನಹಾನಿಕರ ಹೇಳಿಕೆಗಳ ಆರೋಪದ ಮೇಲೆ ನಟ ಅಕ್ಕಿನೇನಿ ನಾಗಾರ್ಜುನ ಅವರಿಂದ ಕಾನೂನು ಕ್ರಮ ಎದುರಿಸುತ್ತಿರುವ ತೆಲಂಗಾಣ ಸಚಿವ ಕೊಂಡ ಸುರೇಖಾ ಅವರು ಬುಧವಾರ ವಿಷಾದ ವ್ಯಕ್ತಪಡಿಸಿದ್ದು, ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದಾರೆ.
ಅರಣ್ಯ ಸಚಿವೆ ಕೊಂಡ ಸುರೇಖಾ ಅವರು ಅಕ್ಟೋಬರ್ 2024 ರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ನಾಗಾರ್ಜುನ ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಿದ ನಂತರ ಇದೀಗ ಸಚಿವರು ಈ ರೀತಿಯ ಘೋಷಣೆ ಮಾಡಿದ್ದಾರೆ.
ಸುರೇಖಾ ಅವರು ನಾಗಾರ್ಜುನ ಮತ್ತು ಅವರ ಕುಟುಂಬದ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಾಗಾರ್ಜುನ ಪುತ್ರ ನಾಗ ಚೈತನ್ಯ ಅವರನ್ನೂ ಸೇರಿದಂತೆ ಸಚಿವರು ಹೇಳಿಕೆ ನೀಡಿದ್ದರು. ನ್ಯಾಯಾಲಯವು ಈ ಹಿಂದೆ ನಾಗಾರ್ಜುನ ಮತ್ತು ಇತರರ ಹೇಳಿಕೆಯನ್ನು ದಾಖಲಿಸಿತ್ತು.
ರಾಜಕೀಯ ನಾಯಕರು ಮತ್ತು ತೆಲುಗು ಸಿನಿಮಾ ಉದ್ಯಮದಿಂದ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು ತಮ್ಮ ಹೇಳಿಕೆಗಳನ್ನು ಹಿಂಪಡೆದಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನನ್ನ ಹೇಳಿಕೆಗಳು ನಾಗಾರ್ಜುನ ಅಥವಾ ಅವರ ಕುಟುಂಬ ಸದಸ್ಯರನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ. "ಅಕ್ಕಿನೇನಿ ನಾಗಾರ್ಜುನ ಗಾರು ಅಥವಾ ಅವರ ಕುಟುಂಬ ಸದಸ್ಯರನ್ನು ನೋಯಿಸುವ ಅಥವಾ ಮಾನಹಾನಿ ಮಾಡುವ ಉದ್ದೇಶ ನನಗಿರಲಿಲ್ಲ. ಅವರ ಬಗ್ಗೆ ನನ್ನ ಹೇಳಿಕೆಗಳಲ್ಲಿ ನೀಡಲಾದ ಯಾವುದೇ ಅನಪೇಕ್ಷಿತ ಅನಿಸಿಕೆಗೆ ನಾನು ವಿಷಾದಿಸುತ್ತೇನೆ ಮತ್ತು ಅದನ್ನು ಹಿಂತೆಗೆದುಕೊಳ್ಳುತ್ತೇನೆ" ಎಂದು ಅವರು ಹೇಳಿದ್ದಾರೆ.