ನವದೆಹಲಿ: ರೆಡ್ ಫೋರ್ಟ್ ಸ್ಫೋಟದಲ್ಲಿ ಸಾವನ್ನಪ್ಪಿದ ಹಲವು ಮಂದಿಯ ಗುರುತು ಪತ್ತೆ ಹಚ್ಚಲು ಅಸಾಧ್ಯವಾಗಿತ್ತು, ಸ್ಫೋಟದ ತೀವ್ರತೆಗೆ ದೇಹಗಳು ಛಿದ್ರಗೊಂಡಿದ್ದವು. ಸೋಮವಾರ ರಾತ್ರಿ ಉದ್ಯಮಿಯೊಬ್ಬರ ಶವ ಪತ್ತೆ ಹಚ್ಚಲು ಟ್ಯಾಟೂ ಗುರುತು ಸಹಾಯ ಮಾಡಿದೆ.
ಹೌದು, ಉದ್ಯಮಿ ಅಮರ್ ಕಟಾರಿಯಾ ಅವರ ಕೈಯ್ಯಲ್ಲಿದ್ದ ಹಚ್ಚೆಯ ಸಹಾಯದಿಂದ ಅವರ ಕುಟುಂಬ ಶವ ಗುರುತಿಸಿದೆ. ಅಮ್ಮ ನನ್ನ ಮೊದಲ ಪ್ರೀತಿ, ಅಪ್ಪ ನನ್ನ ಶಕ್ತಿ, ಎಂಬ ಬರಹ ಅಮರ್ ಕಟಾರಿಯಾ ಕೈಯ್ಯಲ್ಲಿತ್ತು.
ಕೆಲವೇ ಕೆಲವು ಗಂಟೆಗಳ ಹಿಂದೆ ತಮ್ಮ ತಂದೆಗೆ ಕರೆ ಮಾಡಿದ್ದ ಅಮರ್ ಕೆಲಸ ಮುಗಿಸಿ ಹೊರಟಿದ್ದು ಶೀಘ್ರವೇ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸ್ಫೋಟದಲ್ಲಿ ಸಾವನ್ನಪ್ಪಿದವರಲ್ಲಿ 34 ವರ್ಷದ ಔಷಧ ವ್ಯಾಪಾರಿ ಅಮರ್ ಕಟಾರಿಯಾ ಕೂಡ ಒಬ್ಬರು.
ಸಂಜೆ 6:30 ರ ಸುಮಾರಿಗೆ ಭಾಗೀರಥ ಪ್ಯಾಲೇಸ್ ನಲ್ಲಿರುವ ತಮ್ಮ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗುತ್ತಿದ್ದರು. ಅವರ ಫೋನ್ ಸಂಪರ್ಕ ಕಡಿತಗೊಂಡಾಗ, ಅವರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕುಟುಂಬ ಭಾವಿಸಿತು. ಆದರೆ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದ ಹೊತ್ತಿಗೆ, ಕುಟುಂಬಸ್ಥರ ಭರವಸೆ ನುಚ್ಚುನೂರಾಗಿತ್ತು.
ಅಮರ್ ಪೋಷಕರಿಗೆ ಏಕೈಕ ಮಗ. ಅವರ ಪತ್ನಿ,ಮೂರು ವರ್ಷದ ಮಗ ಮತ್ತು ವಿವಾಹಿತ ಸಹೋದರಿಯೊಂದಿಗೆ ವಾಸಿಸುತ್ತಿದ್ದರು. ಅವರ ತಂದೆ ಮಯೂರ್ ವಿಹಾರ್‌ನಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿಯನ್ನು ನಡೆಸುತ್ತಿದ್ದಾರೆ. "ಅವರು ಅಂಗಡಿಯಿಂದ ಹೊರಡುವ ಮೊದಲು ಪ್ರತಿ ಸಂಜೆ ಕರೆ ಮಾಡುತ್ತಿದ್ದರು, ಅದರಂತೆ ಸ್ಫೋಟ ಸಂಭವಿಸಿದ ದಿನವೂ ಕರೆ ಮಾಡಿದ್ದರು ಎಂದು ಅಮರ್ ಸಂಬಂಧಿಕರು ತಿಳಿಸಿದ್ದಾರೆ.
ಎಂಬಿಎ ಪದವೀಧರರಾದ ಅಮರ್, ಸ್ವಂತ ವ್ಯವಹಾರವನ್ನು ಸ್ಥಾಪಿಸುವ ಮೊದಲು ಕಾರ್ಪೊರೇಟ್ ಜಗತ್ತಿನಲ್ಲಿ ತನ್ನ ವೃತ್ತಿಜೀವನ ಪ್ರಾರಂಭಿಸಿದ್ದರು. ಆತ ಮೃದುಭಾಷಿ, ಆದರೆ ಬಹಳ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿ ಎಂದು ಅವರ ಸ್ನೇಹಿತರು ಬಣ್ಣಿಸುತ್ತಾರೆ, ಭಾನುವಾರದಂದು ಮನೆಯಲ್ಲಿ ಮಗನೊಂದಿಗೆ ಆಟವಾಡುತ್ತಾ ಅಥವಾ ಅಂಗಡಿಯಲ್ಲಿ ತಂದೆಗೆ ಸಹಾಯ ಮಾಡುತ್ತಾ ಕಳೆಯುತ್ತಿದ್ದರು. ಮಂಗಳವಾರ ಬೆಳಿಗ್ಗೆ, ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಅವರ ಶವವನ್ನು ಹಸ್ತಾಂತರಿಸಿದರು.