ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಪ್ರಮುಖ ಮಿತ್ರ ಪಕ್ಷವಾದ ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಾಮಾನ್ಯ ಚುನಾವಣಾ ಚಿಹ್ನೆಗಾಗಿ ಭಾರತೀಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ.
ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ನವದೆಹಲಿಯಲ್ಲಿರುವ ಚುನಾವಣಾ ಸಮಿತಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
'2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳಿಗೆ 10 ಚಿಹ್ನೆಗಳಿರುವ ಆದ್ಯತೆಯ ಪಟ್ಟಿಯಿಂದ ಸಾಮಾನ್ಯ ಚಿಹ್ನೆಯೊಂದನ್ನು ಹಂಚಿಕೆ ಮಾಡುವಂತೆ ಕೋರಿ ಎಂಎನ್ಎಂ ಇಂದು ಭಾರತೀಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ' ಎಂದು ಹೇಳಿಕೆ ತಿಳಿಸಿದೆ.
ಎಂಎನ್ಎಂ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆಯ ಮಿತ್ರ ಪಕ್ಷವಾಗಿದೆ. 2021ರ ವಿಧಾನಸಭಾ ಚುನಾವಣೆಗೆ, ಚುನಾವಣಾ ಆಯೋಗವು ಪಕ್ಷಕ್ಕೆ 'ಬ್ಯಾಟರಿ ಟಾರ್ಚ್' ಚಿಹ್ನೆಯನ್ನು ನೀಡಿತ್ತು.