ಚಂಡೀಗಢ: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆಯಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಹರಿಯಾಣದ ಫರಿದಾಬಾದ್‌ನಲ್ಲಿ ಉಗ್ರ ಸಂಘಟನೆಗೆ ಸೇರಿದ ಕಾರನ್ನು ವಶಕ್ಕೆ ಪಡೆದಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಿದ್ದಾರೆ.
ಬುಧವಾರ ಸಂಜೆ ಫರಿದಾಬಾದ್‌ನ ಖಂಡವಾಲಿ ಗ್ರಾಮದಲ್ಲಿ ಉಗ್ರ ಸಂಘಟನೆಗೆ ಸೇರಿದೆ ಎನ್ನಲಾಗುತ್ತಿರುವ ಕೆಂಪು ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕಾರು ವಶಕ್ಕೆ ಪಡೆದ 200 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಕೂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ನಡುವೆ ಸ್ಥಳದಲ್ಲಿ ಕಾರನ್ನು ಪಾರ್ಕ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಉಗ್ರರು ಐಇಡಿಗಳನ್ನು ಸಾಗಿಸಲು ಮೂರು ಕಾರುಗಳನ್ನು ಬಿಳಿ ಹುಂಡೈ ಐ20, ಕೆಂಪು ಇಕೋಸ್ಪೋರ್ಟ್ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳನ್ನು ಖರೀದಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು.
ಈ ಪೈಕಿ ಒಂದು ಕಾರನ್ನು ಸ್ಫೋಟಿಸಲಾಗಿದ್ದು, ಮತ್ತೆರಡು ಕಾರುಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದರಂತೆ ದೆಹಲಿ ಪೊಲೀಸರು ಎಲ್ಲಾ ಪೊಲೀಸ್ ಠಾಣೆಗಳು, ಪೊಲೀಸ್ ಔಟ್‌ಪೋಸ್ಟ್‌ಗಳು ಮತ್ತು ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕೆಂಪು ಫೋರ್ಡ್ ಇಕೋಸ್ಪೋರ್ಟ್ ಕುರಿತು ಮಾಹಿತಿ ನೀಡಿದ್ದರು. ಇದರಂತೆ ಫರೀದಾಬಾದ್ ನಲ್ಲಿ 2ನೇ ಕಾರು ಪತ್ತೆಯಾಗಿದ್ದು, ಇದೀಗ ಮೂರನೇ ಕಾರಿಗಾಗಿ ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳು ಹುಡುಕಾಟ ನಡೆಸುತ್ತಿವೆ.
ಸ್ಫೋಟಗೊಂಡ ಹುಂಡೈ i20 ಅನ್ನು ಚಾಲನೆ ಮಾಡುತ್ತಿದ್ದ ಡಾ. ಉಮರ್ ನಬಿ ಅವರ ಹೆಸರಿನಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ನೋಂದಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.